ಬೆಂಗಳೂರು,ಮೇ 23- ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಗೆಲ್ಲುವುದರೊಂದಿಗೆ ಕಳೆದುಕೊಂಡಿದ್ದ ಕ್ಷೇತ್ರವನ್ನು ಮತ್ತೆ ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ.
ಕೊನೆ ಕ್ಷಣದಲ್ಲಿ ಅಚ್ಚರಿಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ದೇವೇಂದ್ರಪ್ಪ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಅವರನ್ನು ಸುಮಾರು 40 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.
ಪ್ರಾರಂಭದ ಸುತ್ತಿನಿಂದಲೂ ಮುನ್ನಡೆ ಸಾಧಿಸಿದ ದೇವೇಂದ್ರಪ್ಪ ಕೊನೆಯ ಸುತ್ತಿನಲ್ಲಿ 40 ಸಾವಿರ ಮತಗಳ ಅಂತರದಿಂದ ವಿಜಯಶಾಲಿಯಾದರು. ಎದುರಿಸಿದ ಮೊದಲ ಚುನಾವಣೆಯಲ್ಲಿ ಲೋಕಸಭೆಯನ್ನು ಪ್ರವೇಶ ಮಾಡಿದ್ದಾರೆ.
ಕಳೆದ ಬಾರಿ ನಡೆದ ಉಪಚುನಾವಣೆಯಲ್ಲಿ ಈ ಕ್ಷೇತ್ರವನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಕ್ಷೇತ್ರದ ಉಸ್ತುವಾರಿಯಾಗಿದ್ದ ಸಚಿವ ಡಿ.ಕೆ.ಶಿವಕುಮಾರ್ ಚುನಾವಣಾ ನೇತೃತ್ವವನ್ನು ವಹಿಸಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಅವರನ್ನು 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಿದ್ದರು.
ಆದರೆ ಈ ಬಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗಳಿಸಿದ್ದರೂ ಶಾಸಕರ ನಡುವೆ ಉಂಟಾದ ವೈಮನಸ್ಸು ಫಲಿತಾಂಶದ ಮೇಲೆ ಪರಿಣಾಮ ಉಂಟು ಮಾಡಿದೆ.