ಬೆಂಗಳೂರು,ಮೇ 23-ನಗರದ ಮೂರು ಲೋಕಸಭಾ ಕ್ಷೇತ್ರಗಳಲ್ಲೂ ನಿರೀಕ್ಷೆಯಂತೆ ಬಿಜೆಪಿ ಗೆಲುವು ಸಾಧಿಸಿದೆ.
ಕೇಂದ್ರ ಸಚಿವ ಅನಂತಕುಮಾರ್ ಪ್ರತಿನಿಧಿಸುತ್ತಿದ್ದ ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರು ಮೈತ್ರಿ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ಅವರನ್ನು ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಪರಾಭವಗೊಳಿಸಿ ಸಂಸತ್ ಪ್ರವೇಶಿಸಿದ್ದಾರೆ.
ಮೊದಲ ಹಂತದಿಂದಲೂ ಮುನ್ನಡೆ ಕಾಯ್ದುಕೊಂಡು ಬಂದ ತೇಜಸ್ವಿ ಯಾವುದೇ ಸುತ್ತಿನಲ್ಲೂ ಹಿನ್ನಡೆ ಅನುಭವಿಸಲಿಲ್ಲ. ಒಂದು ಸುತ್ತಿನಿಂದ ಮತ್ತೊಂದು ಸುತ್ತಿನಲ್ಲೂ ಮತ ಪ್ರಮಾಣವನ್ನು ಹೆಚ್ಚಿಸಿಕೊಂಡೇ ಸಾಗಿದ ಸೂರ್ಯ ಅಂತಿಮವಾಗಿ ಎರಡು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂ ದ ಸುಲಭ ಜಯ ಸಾಧಿಸಿದರು.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಗೆಲುವಿಗಾಗಿ ಬಿಜೆಪಿ ಮತ್ತು ಮೈತ್ರಿ ಅಭ್ಯರ್ಥಿಗಳ ನಡುವೆ ಹಗ್ಗಜಗ್ಗಾಟ ನಡೆಯುತ್ತಾದರೂ ಅಂತಿಮವಾಗಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಅಲ್ಪಪ್ರಮಾಣದ ಮತಗಳ ಅಂತರದಿಂದ ಗೆಲುವು ಸಾಧಿಸಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.
ಮೈತ್ರಿ ಅಭ್ಯರ್ಥಿ ರಿಜ್ವಾನ್ ಅರ್ಷದ್ ಅವರು ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ಗೆ ಪ್ರಬಲ ಸವಾಲು ಒಡ್ಡಿದ್ದರು.
ಆರಂಭದಲ್ಲಿ ಒಂದೆರಡು ಸುತ್ತಿನ ಮತ ಎಣಿಕೆಯಲ್ಲಿ ಮೋಹನ್ ಮುನ್ನಡೆ ಕಾಯ್ದುಕೊಂಡಿದ್ದರು. ನಂತರದಲ್ಲಿ ಅರ್ಷದ್ ಮುನ್ನಡೆಗೆ ಬಂದರು. ಕೊನೆಯ ಹಂತದವರೆಗೂ ಪ್ರಬಲ ಪೈಪೋಟಿ ನೀಡಿದರಾದರೂ ಅಂತಿಮವಾಗಿ ಪಿ.ಸಿ.ಮೋಹನ್ಗೆ ಗೆಲುವು ಒಲಿಯಿತು.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿರುವ ಸಚಿವ ಕೃಷ್ಣಭೆರೇಗೌಡ ಅವರು, ಬಿಜೆಪಿ ಅಭ್ಯರ್ಥಿ ಸದಾನಂದಗೌಡ ಅವರಿಗೆ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆ ಮೂಡಿಸಿದರಾದರೂ ಕೊನೆಯಲ್ಲಿ ಸದಾನಂದಗೌಡರಿಗೆ ಶರಣಾದರು.
ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳು ಬಿಜೆಪಿ ಭದ್ರಕೋಟೆಯಾಗಿದ್ದು, ಈ ಬಾರಿ ಮೈತ್ರಿ ಪಕ್ಷದ ಅಭ್ಯರ್ಥಿಗಳು ಕೇಸರಿ ಹುರಿಯಾಳುಗಳ ನಿದ್ದೆಗೆಡಿಸಲಿದ್ದಾರೆ ಎಂದು ಬಿಂಬಿಸಲಾಗಿತ್ತಾದರೂ ಮತದಾರರು ಮತ್ತೆ ಬಿಜೆಪಿಗೆ ಮಣೆ ಹಾಕಿದ್ದಾರೆ.