ಬೆಂಗಳೂರು, ಮೇ 23-ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸಂಸದ ಡಿ.ಕೆ.ಸುರೇಶ್ ಮೂರನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದಾರೆ. ಡಿ.ಕೆ.ಸುರೇಶ್ ಅವರಿಗೆ ಅತ್ಯಂತ ಪ್ರಬಲ ಪೈಪೋಟಿ ನೀಡಿದ ಬಿಜೆಪಿ ಅಭ್ಯರ್ಥಿ ಅಶ್ವತ್ಥನಾರಾಯಣಗೌಡ ಪರಾಜಿತಗೊಂಡಿದ್ದಾರೆ.
ತುಮಕೂರು ಜಿಲ್ಲೆಯ ಕುಣಿಗಲ್, ಬೆಂಗಳೂರು ನಗರ ಜಿಲ್ಲೆ ರಾಜರಾಜೇಶ್ವರಿ ನಗರ, ಬೆಂಗಳೂರು ದಕ್ಷಿಣ, ಆನೇಕಲ್,ರಾಮನಗರ ಜಿಲ್ಲೆಯ ಮಾಗಡಿ, ರಾಮನಗರ, ಕನಕಪುರ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 16 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದರು.
ಅದರಲ್ಲಿ ಪ್ರಮುಖವಾಗಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್, ಬಿಜೆಪಿ ಅಶ್ವತ್ಥನಾರಾಯಣಗೌಡ, ಬಿಎಸ್ಪಿಯ ಡಾ.ಚಿನ್ನಪ್ಪ ಚಿಕ್ಕಹಾಗಡೆ, ಉಪೇಂದ್ರ ಅವರ ಪಕ್ಷದ ಮಂಜುನಾಥ್ ಅವರು ಕಣದಲ್ಲಿದ್ದರು.
ಡಿ.ಕೆ.ಸುರೇಶ್ ಅವರು ಶೇ.54ರಷ್ಟು ಮತ ಗಳಿಸಿದರೆ, ಬಿಜೆಪಿ ಅಭ್ಯರ್ಥಿ ಅಶ್ವತ್ಥನಾರಾಯಣಗೌಡ ಅವರು ಶೇ.42ರಷ್ಟು ಮತ ಪಡೆದಿದ್ದಾರೆ. ಸರಿಸುಮಾರು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಕೊನೆಗೂ ಡಿ.ಕೆ.ಸುರೇಶ್ ಗೆಲುವಿನ ನಗೆ ಬೀರಿದ್ದಾರೆ.
ಆರಂಭಿಕ ಹಂತದಲ್ಲಿ ಅಶ್ವತ್ಥನಾರಾಯಣಗೌಡ ಮುನ್ನಡೆಯಲ್ಲಿದ್ದರು ಆನಂತರ ಸುತ್ತುಗಳಲ್ಲಿ ಸತತ ಮುನ್ನಡೆ ಕಾಯ್ದುಕೊಂಡು ಅಂತಿಮವಾಗಿ ಡಿ.ಕೆ.ಸುರೇಶ್ ಗೆಲುವು ಸಾಧಿಸಿದ್ದಾರೆ.
ಕಳೆದ ಎರಡೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸುರೇಶ್ ಚುನಾಯಿತರಾಗಿದ್ದರು.