ಬೆಂಗಳೂರು, ಮೇ 22- ಉದ್ದೇಶಿತ ಎಲಿವೇಟೆಡ್ ಕಾರಿಡಾರ್ ಯೋಜನೆಯನ್ನು ಬಿಟಿಎಸ್ ರಸ್ತೆಯ ರಾಜಾಕಾಲುವೆಯ ಮೇಲೆ ನಿರ್ಮಾಣ ಮಾಡುವ ಪ್ರಸ್ತಾವನೆ ಇಲ್ಲ ಎಂದು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‍ಡಿಸಿಎಲ್) ಸ್ಪಷ್ಟಪಡಿಸುತ್ತದೆ.
ನಗರದ ಬಿಟಿಎಸ್ ರಸ್ತೆಯ ರಾಜಾಕಾಲುವೆಯ ಮೇಲೆ ಎಲಿವೇಟೆಡ್ ಕಾರಿಡಾರ್ ಮಾರ್ಗ ನಿರ್ಮಾಣವಾಗಲಿದೆ ಎಂಬ ಕೆಲವು ಸಂಘಟನೆಗಳ ಹೇಳಿಕೆಯನ್ನು ಆಧರಿಸಿದ ವರದಿಗಳುಆಧಾರರಹಿತವಾಗಿವೆ ಮತ್ತು ಸತ್ಯಕ್ಕೆ ದೂರವಾಗಿವೆ ಎಂದು ನಿಗಮವು ಸ್ಪಷ್ಟಪಡಿಸಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಡಾ.ಕೆ.ಎಸ್.ಕೃಷ್ಣಾ ರೆಡ್ಡಿ ಅವರು, ರಾಷ್ಟ್ರೀಯ ಹಸಿರು ನ್ಯಾಯಪೀಠ ಮತ್ತು ನ್ಯಾಯಾಲಯಗಳ ಆದೇಶಗಳ ಅನ್ವಯವಾಗಿ ಯೋಜನೆಯನ್ನು ರೂಪಿಸಿದ್ದು. ಎಲ್ಲಿಯೂ ಕಾನೂನು ಉಲ್ಲಂಘನೆ ಆಗುವ ರೀತಿಯಲ್ಲಿ ಎಲಿವೇಟೆಡ್ ಕಾರಿಡಾರ್ ಕಾರ್ಯಗತವಾಗುತ್ತಿಲ್ಲ ಎಂದು ತಿಳಿಸಿದರು.
ಕೆಆರ್‍ಡಿಸಿಎಲ್‍ನ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್.ಶಿವಕುಮಾರ್ ಮಾತನಾಡಿ, ಈ ರೀತಿಯ ಯಾವುದೇ ತಪ್ಪು ಗ್ರಹಿಕೆ ಮತ್ತು ತಪ್ಪು ಸಂದೇಶಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದೂ ಸಾರ್ವಜನಿಕರಲ್ಲಿ ಮನವಿ. ಆತಂಕಕ್ಕೆ ಒಳಗಾಗಲು ಯಾವುದೇ ಕಾರಣವಿಲ್ಲ ಮತ್ತು ಜನರು ಯಾವುದೇ ಹಿಂಜರಿಕೆ ಇಲ್ಲದೇ ಕೆಆರ್‍ಡಿಸಿಎಲ್ ಅಧಿಕಾರಿಗಳನ್ನು ಸಂಪರ್ಕ ಮಾಡಿ ಯಾವುದೇ ರೀತಿಯ ಸ್ಪಷ್ಟನೆಗಳನ್ನು ಪಡೆಯಬಹುದು ಎಂದು ಹೇಳಿದರು.
ಒಟ್ಟಾರೆ ಪರಿಸರಕ್ಕೆ ಹೆಚ್ಚು ಧಕ್ಕೆ ಬಾರದ ರೀತಿಯಲ್ಲಿ, ಸಾರ್ವಜನಿಕ, ಖಾಸಗಿ ಆಸ್ತಿಪಾಸ್ತಿಗಳಿಗೆ ಹೆಚ್ಚು ಹಾನಿಯಾಗದ ರೀತಿಯಲ್ಲಿ ಮತ್ತು ಸಾರ್ವಜನಿಕರ ಸಂಚಾರಕ್ಕೆ ಹೆಚ್ಚು ಭಂಗ ಉಂಟಾಗದ ರೀತಿಯಲ್ಲಿ ಈ ಯೋಜನೆಯನ್ನು ಕಾರ್ಯಗತಗೊಳಿಸಲು ನೀಲನಕ್ಷೆಯನ್ನು ರೂಪಿಸಲಾಗಿದೆ ಎಂದು ತಿಳಿಸಿದರು.