ಸರ್ಕಾರಿ ನೌಕರರಿಗೆ ವಾರ್ಷಿಕ ವೇತನ ಬಡ್ತಿ-ಜನವರಿ ಅಥವಾ ಜುಲೈನಿಂದ ಮಂಜೂರು ಮಾಡಲು ಆದೇಶ

ಬೆಂಗಳೂರು, ಮೇ 22- ರಾಜ್ಯ ಸರ್ಕಾರಿ ನೌಕರರಿಗೆ ವಾರ್ಷಿಕ ವೇತನ ಬಡ್ತಿಯನ್ನು ವಿವಿಧ ದಿನಾಂಕಗಳ ಬದಲಾಗಿ ಜನವರಿ ಅಥವಾ ಜುಲೈನಿಂದ ಮಂಜೂರು ಮಾಡಲು ಆದೇಶಿಸಲಾಗಿದೆ.

ವಿವಿಧ ದಿನಾಂಕಗಳಂದು ರಾಜ್ಯ ಸರ್ಕಾರಿ ನೌಕರರ ವಾರ್ಷಿಕ ವೇತನ ಬಡ್ತಿಯನ್ನು ನಿಗದಿಪಡಿಸುವುದಕ್ಕೆ ಬದಲಾಗಿ ಸಂದರ್ಭಾನುಸಾರ ಪ್ರತಿ ವರ್ಷದ ಒಂದನೆ ಜನವರಿ ಅಥವಾ ಒಂದನೆ ಜುಲೈನಿಂದ ಮಂಜೂರು ಮಾಡಲು ಸಿಬ್ಬಂದಿ ಮತ್ತು ಆರೋಗ್ಯ ಸುಧಾರಣಾ ಇಲಾಖೆ ಆದೇಶಿಸಿದೆ.

ಹೀಗಾಗಿ ಸರ್ಕಾರಿ ನೌಕರರಿಗೆ ನೀಡುವ ತುಟ್ಟಿಭತ್ಯೆ ರೀತಿಯಲ್ಲೇ ವೇತನ ಬಡ್ತಿಯೂ ದೊರೆಯಲಿದೆ. ಆರನೆ ವೇತನ ಆಯೋಗದ ಶಿಫಾರಸಿನಂತೆ ವಾರ್ಷಿಕ ವೇತನ ಬಡ್ತಿಯ ದಿನಾಂಕವನ್ನು ಪರಿಷ್ಕರಿಸಿ ನಿಯತಗೊಳಿಸಲು ಆದೇಶಿಸಲಾಗಿದೆ.

ಹೆಚ್ಚುವರಿ ವೇತನ ಬಡ್ತಿ: ರಾಜ್ಯ ಸರ್ಕಾರಿ ಹಾಗೂ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಮತ್ತು ಪ್ರಾಂಶುಪಾಲರಿಗೆ ಮಂಜೂರು ಮಾಡಲಾಗಿರುವ ವೇತನ ಬಡ್ತಿಯನ್ನು ಮೂಲ ವೇತನದೊಂದಿಗೆ ವಿಲೀನಗೊಳಿಸಲು ಸರ್ಕಾರ ಆದೇಶಿಸಿದೆ.

ಕಳೆದ 2016ರ ಜೂನ್ 1ರಿಂದ ಜಾರಿಗೆ ಬರುವಂತೆ ಒಂದು ಹೆಚ್ಚುವರಿ ವೇತನ ಬಡ್ತಿಯನ್ನು ಮಂಜೂರು ಮಾಡಿದ್ದು, 2018ರ ನವೆಂಬರ್ 1ರಿಂದ ಜಾರಿಗೆ ಬರುವಂತೆ ಈ ಬಡ್ತಿಯನ್ನು ಮೂಲ ವೇತನದಲ್ಲಿ ವಿಲೀನಗೊಳಿಸಲಾಗಿದ್ದು, ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರು ಈ ಬಗ್ಗೆ ತುರ್ತು ಕ್ರಮ ವಹಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಸೂಚಿಸಿದೆ.

2018ರ ಪರಿಷ್ಕøತ ವೇತನ ಶ್ರೇಣಿಯಲ್ಲಿ ವಾರ್ಷಿಕ ವೇತನ ಬಡ್ತಿಯ ಹಂತ ಲಭ್ಯವಿಲ್ಲದಿದ್ದಲ್ಲಿ ಮುಂದಿನ ಹಂತಕ್ಕೆ ವೇತನವನ್ನು ನಿಗದಿಪಡಿಸಬೇಕು. ವೇತನ ಮರು ನಿಗದಿಪಡಿಸಿದ ನಂತರವೂ ಪರಿಷ್ಕøತ ವೇತನ ಶ್ರೇಣಿಗಳಲ್ಲಿ ನಿರ್ದಿಷ್ಟ ಹಂತ ಲಭ್ಯವಿಲ್ಲದಿದ್ದರೆ ವೇತನ ಮರು ನಿಗದಿಪಡಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ