ನವದೆಹಲಿ, ಮೇ 22- ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ ಎಂದು ಪುನರುಚ್ಚರಿಸಿರುವ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ವಿದ್ಯುನ್ಮಾನ ಮತಯಂತ್ರಗಳ (ಇವಿಎಂಗಳು) ಮೇಲೆ ದೂಷಣೆ ಮಾಡುವುದು ಸರಿಯಲ್ಲ. ಎನ್ ಡಿಎ ಸರ್ಕಾರ ಅಧಿಕಾರ ಸ್ಪಷ್ಟ ಜನಾದೇಶ ಪಡೆದರೆ ಅದನ್ನು ಗೌರವದಿಂದ ಒಪ್ಪಿಕೊಳ್ಳಿ ಎಂದು ಪ್ರತಿಪಕ್ಷಗಳಿಗೆ ಸಲಹೆ ಮಾಡಿದ್ದಾರೆ.
ಇವಿಎಂಗಳ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನಿಸುತ್ತಿರುವ ವಿರೋಧಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಎನ್. ಚಂದ್ರಬಾಬು ನಾಯ್ಡು, ಮಮತಾ ಬ್ಯಾನರ್ಜಿ ಮತ್ತು ಅಮರಿಂದರ್ ಸಿಂಗ್ ಅವರು ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಗಳಾದಾಗ ಇವಿಎಂಗಳಲ್ಲಿ ಸಮಸ್ಯೆಗಳು ಇರಲಿಲ್ಲ ಅಲ್ಲವೇ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು. ಬಿಜೆಪಿ ಚುನಾವಣೆಯಲ್ಲಿ ಗೆದ್ದಾಗಲೆಲ್ಲಾ ಇವಿಎಂಗಳು ದೋಷ ಎಂದು ಆರೋಪಿಸುತ್ತಿರುವ ವಿರೋಧ ಪಕ್ಷಗಳ ವರ್ತನೆ ಹಾಸ್ಯಾಸ್ಪದ ಎಂದು ರವಿಶಂಕರ್ ಪ್ರಸಾದ್ ಹೇಳಿದರು.
ಚುನಾವಣೆ ಫಲಿತಾಂಶಕ್ಕೆ ಮುನ್ನ ವಿರೋಧಪಕ್ಷಗಳ ಮುಖಂಡರು ಸೋಲಿನಿಂದ ಕಂಗೆಟ್ಟು ಹತಾಶರಾಗಿದ್ದಾರೆ. ಇದಕ್ಕಾಗಿ ಇವಿಎಂಗಳ ಬಗ್ಗೆ ಇಲ್ಲಸಲ್ಲದ ಗೊಂದಲ ಸೃಷ್ಟಿಸಿ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕಾನೂನು ಸಚಿವರು ಟೀಕಿಸಿದರು.