ಬೆಂಗಳೂರು, ಮೇ 22- ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚನೆ ಮಾಡುವ ಉದ್ದೇಶ ಈಡೇರಲು ಪ್ರಾದೇಶಿಕ ಪಕ್ಷಗಳು ಒಟ್ಟಾಗಿರಬೇಕೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅಭಿಪ್ರಾಯಪಟ್ಟಿದ್ದಾರೆ.
ನಿನ್ನೆ ರಾತ್ರಿ ನಡೆದ ಮಾತುಕತೆ ಸಂದರ್ಭದಲ್ಲಿ ಈ ಇಬ್ಬರು ನಾಯಕರು ಒಗ್ಗಟ್ಟಿನ ಮಂತ್ರ ಪಠಿಸಿದ್ದಾರೆ.
ನಾಳೆ ಲೋಕಸಭೆ ಚುನಾವಣಾ ಫಲಿತಾಂಶ ಪ್ರಕಟಗೊಂಡ ನಂತರ ಮುಂದಿನ ತೀರ್ಮಾನದ ಬಗ್ಗೆ ಸಮಾಲೋಚನೆ ನಡೆಸೋಣ. ಪ್ರಾದೇಶಿಕ ಪಕ್ಷಗಳು ಒಟ್ಟಾಗಿದ್ದು, ಕೇಂದ್ರದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಸೂಕ್ತ ನಿರ್ಧಾರ ಕೈಗೊಳ್ಳೋಣ ಎಂದು ಉಭಯ ನಾಯಕರು ಮಾತುಕತೆ ಸಂದರ್ಭದಲ್ಲಿ ಪ್ರಸ್ತಾಪಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಚಂದ್ರಬಾಬು ನಾಯ್ಡು ಅವರು ವಿವಿಧ ಪ್ರಾದೇಶಿಕ ನಾಯಕರ ಭೇಟಿ ಮಾಡಿದ ನಂತರ ನಿನ್ನೆ ರಾತ್ರಿ ದೇವೇಗೌಡರನ್ನು ಭೇಟಿ ಮಾಡಿ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೂಡ ಹಾಜರಿದ್ದರು.
ಲೋಕಸಭೆ ಚುನಾವಣೋತ್ತರ ಸಮೀಕ್ಷೆಗಳು, ಪ್ರಚಲಿತ ರಾಜಕೀಯ ವಿದ್ಯಮಾನಗಳು, ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚನೆ ಮಾಡುವ ಪ್ರಯತ್ನಗಳ ಕುರಿತಂತೆ ವಿಚಾರ ವಿನಿಮಯ ಮಾಡಿಕೊಂಡಿದ್ದಾರೆ.
ಭೇಟಿ ನಂತರ ಮಾತನಾಡಿದ ಚಂದ್ರಬಾಬು ನಾಯ್ಡು ಮಹಾಘಟಬಂಧನ್ನೊಂದಿಗೆ ಗುರುತಿಸಿಕೊಂಡಿರುವ ಎಲ್ಲ ರಾಜಕೀಯ ಪಕ್ಷಗಳು ಒಗ್ಗಟ್ಟಿನಿಂದಿದ್ದು, ಲೋಕಸಭೆ ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಕೇಂದ್ರದಲ್ಲಿ ಹೊಸ ಸರ್ಕಾರ ರಚಿಸುವ ಕುರಿತಂತೆ ಸಮಾಲೋಚನೆ ನಡೆಸಲಾಗುತ್ತದೆ ಎಂದು ಹೇಳಿದರು.
ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ವಿವಿ ಪ್ಯಾಟ್ನಲ್ಲಿನ ಮತ ಎಣಿಕೆ ಮಾಡುವಂತೆ ಆಗ್ರಹ ಪಡಿಸುತ್ತಿದ್ದೇವೆ. 2009ರಿಂದಲೂ ಇವಿಎಂಗಳನ್ನು ಬದಲಿಸಬೇಕೆಂದು ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತಲೇ ಇದ್ದೇವೆ. ಪ್ರಚಲಿತ ವಿದ್ಯಮಾನಗಳ ಬಗ್ಗೆ ದೇವೇಗೌಡರ ಸಲಹೆಯನ್ನು ಪಡೆದುಕೊಂಡಿರುವುದಾಗಿ ಹೇಳಿದ ಅವರು, ಮುಂದಿನ ಪ್ರಧಾನಿ ಯಾರಾಗಬೇಕೆಂಬ ಬಗ್ಗೆ ಚರ್ಚೆ ಮಾಡಿಲ್ಲ. ಚುನಾವಣಾ ಫಲಿತಾಂಶದ ನಂತರ ಆ ಬಗ್ಗೆ ಸಮಾಲೋಚನೆ ನಡೆಸಲಾಗುವುದು ಎಂದರು.
ದೇವೇಗೌಡರು ಮಾತನಾಡಿ, 2009ರ ನಂತರ ಇಲ್ಲಿಯವರೆಗೂ ಇವಿಎಂ ಬಳಕೆ ನಿಲ್ಲಿಸುವಂತೆ ಆಯೋಗಕ್ಕೆ ಮನವಿ ಮಾಡುತ್ತಲೇ ಇದ್ದೇವೆ. ಆದರೂ ಸಕಾರಾತ್ಮಕವಾದ ಕ್ರಮವನ್ನು ಆಯೊಗ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, 2004ರ ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ ಜೆಡಿಎಸ್ಗೆ ಐದು ಅಥವಾ ಆರು ಸ್ಥಾನಗಳಲ್ಲಿ ಮಾತ್ರ ಗೆಲ್ಲುತ್ತದೆ ಎಂದು ಹೇಳಿದ್ದವು. ಆದರೆ, 58 ಕ್ಷೇತ್ರಗಳಲ್ಲಿ ಜೆಡಿಎಸ್ ಆಗ ಗೆಲುವು ಪಡೆದಿತ್ತು ಎಂದು ಸಮೀಕ್ಷೆಗಳ ಬಗ್ಗೆ ಅಸಮಾಧಾನ ಹೊರಹಾಕಿದರು.