ಇಸ್ತೋದಿಂದ ಮತ್ತೊಂದು ಮಹತ್ವದ ಮೈಲಿಗಲ್ಲು

ಶ್ರೀಹರಿಕೋಟ (ಆಂದ್ರಪ್ರದೇಶ), ಮೇ 22-ಹಲವು ಸಾಧನೆ ಮತ್ತು ವಿಕ್ರಮಗಳಿಗೆ ಸಾಕ್ಷಿಯಾಗಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋ ಇಂದು ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಗಡಿಗಳ ಮೇಲೆ ಹದ್ದಿನ ಕಣ್ಣಿನ ನಿಗಾ ಇಡುವ ಉದ್ದೇಶದಿಂದಲೇ ನಿರ್ಮಿಸಲಾಗಿರುವ ರೇಡಾರ್ ಇಮೇಜಿಂಗ್ ಪರಿವೀಕ್ಷಕ ಉಪಗ್ರಹ-ರಿಸ್ಯಾಟ್-2ಬಿಯನ್ನು ಇಸ್ರೋ ಇಂದು ಮುಂಜಾನೆ ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಮುಂಜಾನೆ 5.30ರಲ್ಲಿ ರಿಸ್ಯಾಟ್-2ಬಿ ಉಪಗ್ರಹವನ್ನು ಹೊತ್ತ ಪಿಎಸ್‍ಎಲ್‍ವಿ-ಸಿ46 ರಾಕೆಟ್ ನಭಕ್ಕೆ ಯಶಸ್ವಿಯಾಗಿ ಚಿಮ್ಮಿತು. ಉಡ್ಡಯನವಾದ 15 ನಿಮಿಷಗಳಲ್ಲಿ ಇದು ಉದ್ದೇಶಿತ ಕಕ್ಷೆ ಸೇರುವಲ್ಲಿ ಸಫಲವಾಗಿದ್ದು, ತನ್ನ ಕಾರ್ಯಗಳನ್ನು ಸಮರ್ಥವಾಗಿ ನಿರ್ವಹಿಸಲು ಆರಂಭಿಸಿದೆ. ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‍ವರ್ಕ್ ಈ ಉಪಗ್ರಹವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ ಎಂದು ಇಸ್ರೋ ತಿಳಿಸಿದೆ.

ಗಡಿ ಭಾಗಗಳಲ್ಲಿ ಉಗ್ರರ ಚಟುವಟಿಕೆಗಳು ಸೇರಿದಂತೆ ಭೂಮಿಯ ಮೇಲೆ ನಿಗಾ ಇಡುವ ಸಾಮಥ್ರ್ಯದ ಆರ್‍ಐಎಸ್‍ಎಟಿ(ರಿಸ್ಯಾಟ್-2ಬಿ) 615 ಕೆಜಿ ತೂಕ ಹೊಂದಿದೆ.

ಪಾಕ್, ಬಾಂಗ್ಲಾ ಸೇರಿದಂತೆ ಗಡಿ ಭಾಗಗಳಲ್ಲಿ ಒಳ ನುಸುಳುವ ಭಯೋತ್ಪಾದಕರ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡುವ ಈ ಅತ್ಯಾಧುನಿಕ ಉಪಗ್ರಹ ಬಹು ಉದ್ದೇಶಗಳಿಗೂ ಸಹಕಾರಿ. ಕೃಷಿ, ಅರಣ್ಯ ಪ್ರದೇಶ ಸಂರಕ್ಷಣೆ ಹಾಗೂ ನೈಸರ್ಗಿಕ ವಿಕೋಪ ನಿರ್ವಹಣೆಗೆ ರಿಸ್ಯಾಟ್-2ಬಿ ನೆರವಾಗಲಿದೆ.

ಭಾರತದ ಗಡಿ ಪ್ರದೇಶಗಳ ಪಕ್ಕದಲ್ಲಿ ತಲೆಎತ್ತಿರುವ ಭಯೋತ್ಪಾದಕರ ಅಡಗುದಾಣಗಳು ಮತ್ತು ಉಗ್ರರ ತರಬೇತಿ ಶಿಬಿರಗಳನ್ನು ಪತ್ತೆ ಮಾಡಿ ಅವುಗಳನ್ನು ಧ್ವಂಸಗೊಳಿಸುವ ಉದ್ದೇಶದಿಂದಲೇ ಈ ಉಪಗ್ರಹವನ್ನು ವಿಶೇಷವಾಗಿ ಅಭಿವೃದ್ದಿಗೊಳಿಸಲಾಗಿದೆ.

ದಟ್ಟ ಮೋಡವಿದ್ದರೂ ಉಗ್ರಗಾಮಿಗಳ ಚಲನವಲನ ಮತ್ತು ಭೂಮಿಯ ಮೇಲೆ ನಿಖರ ನಿಗಾ ಇಡುವ ಸಾಮಥ್ರ್ಯವನ್ನು ರಿಸ್ಯಾಟ್-2ಬಿ ಹೊಂದಿದೆ. ಈ ಉಪಗ್ರಹವನ್ನು ಅಂತರಿಕ್ಷದ ಹದ್ದಿನ ಕಣ್ಣು ಎಂದೇ ಬಣ್ಣಿಸಲಾಗಿದ್ದು, ಭಯೋತ್ಪಾದಕರ ನಿಗ್ರಹಕ್ಕೆ ಇದನ್ನು ಭಾರತದ ಹೊಸ ಬ್ರಹ್ಮಾಸ್ತ್ರವೆಂದೂ ಸಹ ಪರಿಗಣಿಸಲಾಗಿದೆ.

2009ರಲ್ಲಿ ಉಡಾವಣೆ ಮಾಡಲಾಗಿದ್ದ ರಿಸ್ಯಾಟ್-2ಗೆ 2ಬಿ ಪರ್ಯಾಯವಾಗಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ತಿಳಿಸಿದ್ದಾರೆ.

ಎಸ್ಯಾಟ್ 2ಬಿ ಸಿಂಥೆಟಿಕ್ ಅಪರ್ಚರ್ ರೇಡಾರ್ ಹೊಂದಿದ್ದು, ಹಗಲು ಮತ್ತು ರಾತ್ರಿ ಭೂಮಿಯ ಚಿತ್ರಗಳನ್ನು ನಿರಂತರವಾಗಿ ಕ್ಲಿಕ್ಕಿಸುತ್ತದೆ. ಮೋಡದ ಮರೆಯಲ್ಲಿಯೂ ಸ್ಪಷ್ಟ ದೃಶ್ಯಗಳ ಬಗ್ಗೆ ಮಾಹಿತಿ ನೀಡುತ್ತದೆ.

ರಿಸ್ಯಾಟ್-2ಬಿ ಹೊತ್ತು ಗಗನಕ್ಕೆ ಚಿಮ್ಮಿದ ಪಿಎಸ್‍ಎಲ್‍ಬಿ-ಸಿ46 ಭಾರತದ ಮಹತ್ವಾಕಾಂಕ್ಷೆಯ ಪಿಎಸ್‍ಎಲ್‍ವಿ ರಾಕೆಟ್‍ನ 14ನೇ ಯಶಸ್ವಿ ಯಾನ ಎಂಬುದು ಮತ್ತೊಂದು ಹೆಗ್ಗಳಿಕೆ. ಇದು ಈ ವರ್ಷದ ಮೂರನೇ ಪಿಎಸ್‍ಎಲ್‍ವಿ ಸಾಧನೆಯೂ ಆಗಿದೆ.

ಪ್ರಧಾನಿ ಅಭಿನಂದನೆ:
ಗಡಿ ಕಾಯುವ ರಿಸ್ಯಾಟ್-2ಬಿ ಉಪಗ್ರಹವನ್ನು ಯಶಸ್ವಿಯಾಗಿ ಉಡ್ಡಯನ ಮಾಡಿರುವ ಇಸ್ರೋ ವಿಜ್ಞಾನಿಗಳನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಅಭಿನಂದಿಸಿದ್ದಾರೆ.

ಭಾಹ್ಯಾಕಾಶ ಕ್ಷೇತ್ರದ ಸಾಧನೆಯಲ್ಲಿ ಭಾರತ ಮತ್ತೊಂದು ಹೊಸ ಇತಿಹಾಸ ನಿರ್ಮಿಸಿದೆ. ಇದಕ್ಕಾಗಿ ನಾನು ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸುತ್ತೇನೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ