ನವದೆಹಲಿ: ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಮತ್ತು ಪುತ್ರ, ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ಗೆ ಕೇಂದ್ರೀಯ ತನಿಖಾ ದಳ(ಸಿಬಿಐ) ಕ್ಲೀನ್ ಚಿಟ್ ನೀಡಿದೆ.
2013, ಆ. 07ರ ಪ್ರಕರಣದ ತನಿಖೆಯನ್ನು ಇಂದು ಕೊನೆಗೊಳಿಸಿದ್ದು, ಮುಲಾಯಂ ಸಿಂಗ್ ಯಾದವ್ ಹಾಗೂ ಅಖಿಲೇಶ್ ಯಾದವ್ ವಿರುದ್ಧ ಸಾಮಾನ್ಯ ಪ್ರಕರಣವನ್ನು ದಾಖಲಿಸಿಕೊಳ್ಳಲು ಯಾವುದೇ ಸಾಕ್ಷ್ಯಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಮುಚ್ಚುತ್ತಿರುವುದಾಗಿ ಸಿಬಿಐ ತಿಳಿಸಿದೆ. ಅಲ್ಲದೇ ಈ ಕುರಿತು ಸುಪ್ರೀಂಕೋರ್ಟ್‌ಗೆ ಸಿಬಿಐ ಅಫಿಡವಿಟ್ ಸಲ್ಲಿಸಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ನ್ಯಾಯಮೂರ್ತಿ ದೀಪಕ್ ಗುಪ್ತಾ ಅವರನ್ನೊಳಗೊಂಡ ವಿಭಾಗೀಯ ಪೀಠವು, ವಕೀಲ ವಿಶ್ವನಾಥ್ ಚತುರ್ವೇದಿ ಅವರು ಸಲ್ಲಿಸಿದ್ದ ಆದಾಯಕ್ಕೂ ಮೀರಿದ ಅಕ್ರಮ ಆಸ್ತಿ ಸಂಪಾದನೆ ಕುರಿತಂತೆ ಸಲ್ಲಿಸಿದ್ದ ಅರ್ಜಿ ಕುರಿತಾಗಿ ಪ್ರತಿಕ್ರಿಯೆ ನೀಡುವಂತೆ ಸಿಬಿಐಗೆ ನಿರ್ದೇಶನ ನೀಡಿತ್ತು. ಮಾ. 25 ರಂದು ನಡೆದ ವಿಚಾರಣೆಯಲ್ಲಿ ಸಿಬಿಐಗೆ ನೋಟಿಸ್ ಜಾರಿ ಮಾಡಿದ್ದ ಸುಪ್ರೀಂ, ಎರಡು ವಾರಗಳಲ್ಲಿ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಕೇಳಿತ್ತು.
1999 ಮತ್ತು 2005ರ ಉತ್ತರ ಪ್ರದೇಶದ ತಮ್ಮ ಆಡಳಿತಾವಧಿಯಲ್ಲಿ ಮುಲಾಯಂ ಸಿಂಗ್ ಯಾದವ್ ಅವರು ಸುಮಾರು 100 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿಯನ್ನು ಸಂಪಾದಿಸಿದ್ದಾರೆ ಎಂದು ಆರೋಪಿಸಲಾಗಿತ್ತು. 2005ರಲ್ಲಿ ಕಾಂಗ್ರೆಸ್ ಮುಖಂಡ ವಿಶ್ವನಾಥ್ ಚತುರ್ವೇದಿ ಮುಲಾಯಂ ಸಿಂಗ್ ಯಾದವ್ ಮತ್ತು ಅಖಿಲೇಶ್ ಸೇರಿದಂತೆ ಅವರ ಮಕ್ಕಳು, ಸೊಸೆ ಡಿಂಪಲ್ ಅಧಿಕಾರ ದುರ್ಬಳಕೆ ಮಾಡಿಕೊಂಡು ಆದಾಯಕ್ಕೂ ಮೀರಿದ ಆಸ್ತಿಯನ್ನು ಸಂಪಾದಿಸಿದ್ದಾರೆ. ಈ ಕುರಿತು ತನಿಖೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
CBI clean chit to Mulayam and Akhilesh Yadav in disproportionate assets case