ನವ ದೆಹಲಿ: ಲೋಕಸಭೆ ಚುನಾವಣೆಯ ಕೊನೆಯ ಹಂತದ ಮತದಾನ ಮುಗಿದಿದಿ. ಆದರೆ, ಮತದಾನ ಮುಗಿಯುತ್ತಿದ್ದಂತೆ ದೇಶದ ಎಲ್ಲಾ ಸಮೀಕ್ಷೆಗಳು ಮತ್ತೆ ಎನ್ಡಿಎ ಮೈತ್ರಿ ಕೂಟಕ್ಕೆ ಮತ್ತೆ ಬಹುಮತ ಸಿಗಲಿದೆ ಎಂದು ಭವಿಷ್ಯ ನುಡಿದಿತ್ತು. ಆದರೆ, ಸಮೀಕ್ಷೆಗಳ ಭವಿಷ್ಯವನ್ನು ತಳ್ಳಿಹಾಕಿರುವ ರಾಷ್ಟ್ರ ನಾಯಕರು ತಾವು ಸಮೀಕ್ಷೆಯನ್ನೂ ನಂಬಲ್ಲ ಇವಿಎಂ ಯಂತ್ರಗಳನ್ನೂ ನಂಬಲ್ಲ ಎಂದು ತಿಳಿಸಿದ್ದಾರೆ.
ಈ ಕುರಿತು ಭಾನುವಾರ ರಾತ್ರಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, “ಈ ಚುನಾವಣೆಯಲ್ಲೂ ಇವಿಎಂ ಯಂತ್ರಗಳನ್ನು ದುರುಪಯೋಗ ಪಡಿಸಿಕೊಂಡಿರುವ ಸಾಧ್ಯತೆ ಇದೆ. ಇನ್ನೂ ಚುನಾವಣಾ ಸಂದರ್ಭದಲ್ಲಿ ನಮೋ ಟಿವಿ, ಮೋದಿ ಸೇನೆ, ಹಾಗೂ ಇದೀಗ ಕೇದಾರ್ನಾಥ್ ನಾಟಕಗಳು ರಂಗೇರಿದ್ದವು.
ಆದರೆ ಇದೆಲ್ಲದರ ಬಗ್ಗೆ ಚುನಾವಣಾ ಆಯೋಗ ಮೌನವಹಿಸುವ ಮೂಲಕ ಮೋದಿ ಅಂಡ್ ಟೀಮ್ ಎದುರು ಸಂಪೂರ್ಣ ಶರಣಾಗತಿಯಾಗಿದೆ. ಇಷ್ಟು ವರ್ಷ ಚುನಾವಣಾ ಆಯೋಗ ಎಂದರೆ ಭಯ ಮತ್ತು ಗೌರವವಿತ್ತು. ಆದರೆ, ಇನ್ನೂ ಇವು ಉಳಿಯಲು ಸಾಧ್ಯವಿಲ್ಲ” ಎಂದು ಚುನಾವಣಾ ಆಯೋಗ ವಿರುದ್ಧ ಚಾಟಿ ಬೀಸಿದ್ದಾರೆ.
ಸಮೀಕ್ಷೆಗಳ ಕುರಿತು ಟ್ವೀಟ್ನಲ್ಲೇ ಪ್ರತಿಕ್ರಿಯಿಸಿರುವ ಕೋಲ್ಕತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, “ಈ ಸಮೀಕ್ಷೆ ಗಾಸಿಪ್ಗಳನ್ನು ನಾನು ನಂಬುವುದಿಲ್ಲ. ಆದರೆ, ಈ ಸಮೀಕ್ಷೆಗಳನ್ನು ನೋಡಿದರೆ ಸಾವಿರಾರು ಇವಿಎಂ ಯಂತ್ರಗಳನ್ನು ಬದಲಾಯಿಸಿರುವ ಸಾಧ್ಯತೆ ಕುರಿತು ಸಂದೇಹ ಮೂಡುತ್ತಿದೆ. ಹೀಗಾಗಿ ಎಲ್ಲಾ ವಿರೋಧ ಪಕ್ಷಗಳು ಒಟ್ಟಾಗಬೇಕು. ಇದರ ವಿರುದ್ಧ ಹೋರಾಟ ನಡೆಸಬೇಕು ಎಂದು ಕರೆ ನೀಡಿದ್ದಾರೆ.
ಒಟ್ಟಾರೆ ಚುನಾವಣಾ ಕಣದಲ್ಲಿ ಮತ್ತೊಮ್ಮೆ ಇವಿಎಂ ಯಂತ್ರಗಳ ವಿರುದ್ಧ ಅಪಸ್ವರ ಕೇಳಿಬರುತ್ತಿದೆ. ಒಂದು ವೇಳೆ ಚುನಾವಣೋತ್ತರ ಸಮೀಕ್ಷೆಗಳು ಸತ್ಯವಾದರೆ, ಇವಿಎಂ ಕುರಿತ ಸುದ್ದಿ ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿರುವುದು ,ವಿರೋಧ ಪಕ್ಷಗಳು ಇವಿಎಂ ಯಂತ್ರಗಳ ಸಾಚಾತನವನ್ನು ಓರೆಗಲ್ಲಿಗೆ ಹಚ್ಚಲು ವೇದಿಕೆ ಸಿದ್ದಪಡಿಸುವುದು ಖಚಿತ ಎನ್ನಲಾಗುತ್ತಿದೆ.