ದೇವಾಲಯಗಳ ಭೇಟಿಯನ್ನು ಮುಂದುವರೆಸಿದ ಮಾಜಿ ಪ್ರಧಾನಿ ದೇವೇಗೌಡರು

ಬೆಂಗಳೂರು, ಮೇ 20-ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ದೇವಾಲಯಗಳ ಭೇಟಿಯನ್ನು ಮುಂದುವರೆಸಿದ್ದು, ಇಂದು ತಮಿಳುನಾಡಿನಲ್ಲಿ ಶ್ರೀರಂಗಂನಲ್ಲಿ ರಂಗನಾಥಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಇಂದು ಬೆಳಗ್ಗೆ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಸೇರಿದಂತೆ ಕುಟುಂಬ ಸದಸ್ಯರೊಂದಿಗೆ ತಮಿಳುನಾಡಿಗೆ ತೆರಳಿದ ಗೌಡರು ತಿರುವನೂರು ಜಿಲ್ಲೆಯ ರಾಜಗೋಪಾಲಸ್ವಾಮಿ ಮತ್ತು ಭಾಸ್ಕರ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ನಂತರ ಶ್ರೀರಂಗಂಗೆ ತೆರಳಿ ರಂಗನಾಥಸ್ವಾಮಿಯ ದರ್ಶನ ಪಡೆದರು ಎಂದು ಉನ್ನತ ಮೂಲಗಳು ತಿಳಿಸಿವೆ.

ಇತ್ತೀಚೆಗೆ ಉಡುಪಿ ಬಳಿಯ ರೆಸಾರ್ಟ್‍ನಲ್ಲಿ ಪ್ರಕೃತಿ ಚಿಕಿತ್ಸೆ ಪಡೆದ ಗೌಡರು, ಶೃಂಗೇರಿ ಶಾರದಾಂಬೆ, ಉಡುಪಿ ಶ್ರೀಕೃಷ್ಣ ದೇವಾಲಯಗಳಲ್ಲೂ ವಿಶೇಷ ಪೂಜೆ ಸಲ್ಲಿಸಿದ್ದರು. ಶನಿವಾರ ತಮ್ಮ ಹುಟ್ಟುಹಬ್ಬದ ಅಂಗವಾಗಿ ಕುಟುಂಬ ಸದಸ್ಯರೊಂದಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದರು. ಶ್ರೀರಂಗಂನ ರಂಗನಾಥಸ್ವಾಮಿ ದರ್ಶನ ಪಡೆದು ಸಂಜೆ ವೇಳೆಗೆ ಬೆಂಗಳೂರಿಗೆ ಮರಳುವ ಕಾರ್ಯಕ್ರಮವಿದೆ ಎಂದು ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ