ಬೆಂಗಳೂರು: ರಾಜ್ಯದಲ್ಲಿ ಸಂಕಷ್ಟದ ಪರಿಸ್ಥಿತಿ ಇದ್ದಾಗಲೇ ಸಚಿವ ಡಿಕೆ ಶಿವಕುಮಾರ್ ಅವರು ವಿದೇಶಕ್ಕೆ ಹೊರಟಿದ್ದು, ಇದೀಗ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಹೌದು. ಏನೇ ಸಮಸ್ಯೆ ಇದ್ದರೂ ನಾನೀದ್ದೇನೆ ಎಂದು ಹೇಳುತ್ತಾ, ಸರ್ಕಾರದ ಹಿತ ಕಾಯಲು ನಿಂತಿದ್ದ ಟ್ರಬಲ್ ಶೂಟರ್ ಸಂಕಷ್ಟದ ಸಮಯದಲ್ಲೇ ಕೈ ಕೊಟ್ರಾ ಅನ್ನೋ ಅನುಮಾನವೊಂದು ಮೂಡಿದೆ. ರಾಜ್ಯ ಸಮ್ಮಿಶ್ರ ಸರ್ಕಾರದ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಇನ್ನು 7 ದಿನಗಳ ಕಾಲ ನಾಟ್ ರೀಚೆಬಲ್ನಲ್ಲಿ ಇರಲಿದ್ದಾರೆ.
ಭಾನುವಾರ ರಾತ್ರಿ ದೆಹಲಿಯಿಂದ ಕುಟುಂಬ ಸಮೇತ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದಾರೆ. ಮೇ 27ರವರೆಗೆ ಆಸ್ಟ್ರೇಲಿಯಾ ಪ್ರವಾಸ ಮಾಡಲಿರುವ ಡಿಕೆಶಿ, ಸಂಪೂರ್ಣವಾಗಿ ರಾಜಕಾರಣ ಮರೆತು ಕುಟುಂಬದೊಂದಿಗೆ ಕಾಲ ಕಳೆಯಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಮೇ 23 ರ ಫಲಿತಾಂಶದ ನಂತರ ರಾಜ್ಯ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಅನ್ನುವ ಸ್ಥಿತಿ ಇದೆ. ಇಂತಹ ಸಮಯದಲ್ಲೇ ಡಿ.ಕೆ.ಶಿವಕುಮಾರ್ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದಾರೆ. ಡಿಕೆಶಿ ಅವರು ಸರ್ಕಾರಕ್ಕೆ ಸಂಕಷ್ಟ ಬಂದಾಗ ದೋಸ್ತಿಗಳ ನಡುವೆ ಭಿನ್ನಾಭಿಪ್ರಾಯ ಬಂದಾಗೆಲ್ಲ ಮುಂದೆ ನಿಂತು ಸರಿಪಡಿಸಿದ್ದರು.
ಲೋಕ ಸಮರದ ಫಲಿತಾಂಶದ ನಂತರ ರಾಜ್ಯ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಎಂಬ ಆತಂಕವಿದ್ದು, ಅದರಲ್ಲೂ ಮೈತ್ರಿ ಸರ್ಕಾರದ ಅಸ್ತಿತ್ವವೇ ಅಲ್ಲಾಡಬಹುದು ಎಂಬ ಮಾತು ಜೋರಾಗಿಯೇ ಕೇಳಿ ಬರುತ್ತಿದೆ. ಈ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಆಸ್ಟ್ರೇಲಿಯಾ ಪ್ರವಾಸ ಕಾಕತಾಳಿಯವೋ ಅಥವಾ ಉದ್ದೇಶ ಪೂರಕವೋ ಅನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.