ಕೋಲ್ಕತ್ತಾ: ಏಳನೇ ಹಂತದ ಮತದಾನ ನಡೆಯುತ್ತಿರುವ ಪಶ್ಚಿಮಬಂಗಾಳದಲ್ಲಿ ಹಲವೆಡೆ ಹಿಂಸಾಚಾರ ದಾಖಲಾಗಿದೆ. ಮಥುರಾಪುರ ಲೋಕಸಭಾ ಚುನಾವಣಾ ಕ್ಷೇತ್ರದ ರಾದಿಗೈ ವಿಧಾನಸಭಾ ಕ್ಷೇತ್ರದಲ್ಲಿ ಕಚ್ಛಾ ಬಾಂಬ್ ಸ್ಪೋಟಗೊಂಡಿದ್ದು, ಹಿಂಸಾಚಾರ ಭುಗಿಲೆದ್ದಿದೆ.
ಹಲವು ಕಡೆ ಮತಗಟ್ಟೆಯಲ್ಲಿ ಇವಿಎಂ ಕೈ ಕೊಟ್ಟ ಹಿನ್ನೆಲೆ ಮತದಾನ ವಿಳಂಬವಾಗಿದೆ. ಇನ್ನು ಕೆಲವು ಕಡೆ ವಿವಿಪ್ಯಾಟ್ ಕೆಲಸ ಮಾಡಿಲ್ಲ ಎಂದು ವರದಿಯಾಗಿದೆ. ಕೋಲ್ಕತ್ತಾ ಸೇರಿದಂತೆ ಹಲವು ಕಡೆ ಮತಯಂತ್ರಗಳು ಸರಿಯಾಗಿ ಕಾರ್ಯ ನಿರ್ವಹಿಸದ ಹಿನ್ನೆಲೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉತ್ತರ ಕೋಲ್ಕತ್ತಾದಲ್ಲಿ ಚುನಾವಣಾ ಅಧಿಕಾರಿಗಳು ತಮಗೆ ಬೆದರಿಕೆ ಹಾಕಿದ್ದಾರೆ ಎಂದು ಪ್ರತಿಪಕ್ಷ ಅಭ್ಯರ್ಥಿಗಳ ಆರೋಪಿಸಿದ್ದಾರೆ. ಚುನಾವಣಾ ಅಧಿಕಾರಿಗಳು ನಮ್ಮನ್ನು ಥಳಿಸಿ ಹೊರ ಹಾಕಿದ್ದಾರೆ ಎಂದು ಆರೋಪಿಸಿ ಸಿಪಿಐ ಅಭ್ಯರ್ಥಿ ಗೋಷ್ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ, ಬಿಜೆಪಿ ಅಭ್ಯರ್ಥಿ ರಾಹುಲ್ ಸಿನ್ಹಾ ಕೂಡ ತಮಗೆ ಚುನಾವಣಾ ಅಧಿಕಾರಿಗಳು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಕಳೆದ ರಾತ್ರಿ ರಾಜರ್ಹಟ್ ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಲಾಗಿದೆ, ರಾಯ್ದಿಗಿಯಲ್ಲಿ ಕಚ್ಚಾ ಬಾಂಬ್ ಸ್ಪೋಟಿಸಿದೆ. ಕೆಲವು ಪ್ರದೇಶಗಳಲ್ಲಿ ಹೊರತು ಪಡಿಸಿ ಇನ್ನುಳಿದ ಪ್ರದೇಶಗಳಲ್ಲಿ ಶಾಂತಿಯುತವಾಗಿ ಮತದಾನ ನಡೆದಿದೆ.
ಬಸಿರಾತ್ನದಲ್ಲಿ ಬಿಜೆಪಿ-ಟಿಎಂಸಿ ನಡುವೆ ಘರ್ಷಣೆ ನಡೆದಿದ್ದು, ಬಿ ಜೆಪಿ ಅಭ್ಯರ್ಥಿ ಅನುಪಮ್ ಹಜಾರ್ ಕಾರು ಧ್ವಂಸಗೊಳಿಸಲಾಗಿದೆ. ಟಿಎಂಸಿ ಸೋಲುವ ಭಯದಿಂದ ಈ ರೀತಿ ಹಿಂಸಾಚಾರಕ್ಕೆ ಮುಂದಾಗಿದೆ, ಟಿಎಂಸಿ ಕಾರ್ಯಕರ್ತರು ಚುನಾವಣಾಧಿಕಾರಿಗಳನ್ನು ಬೆದರಿಸಿದ್ದಾರೆ. ಈ ಘಟನೆಯಲ್ಲಿ ನಮ್ಮ ಕಾರ್ಯಕರ್ತರು ಗಾಯಗೊಂಡಿದ್ದಾರೆ ಎಂದು ಹಜಾರೆ ಆರೋಪಿಸಿದ್ದಾರೆ.
ಚುನಾವಣೆಗೆ ಮುನ್ನ ಉಂಟಾಗಿದ್ದ ಹಿಂಸಾಚಾರವನ್ನು ಮತದಾನದಂದು ಮರುಕಳಿಸುವಂತೆ ಮಮತಾ ಬ್ಯಾನರ್ಜಿ ನೋಡಿಕೊಂಡಿದ್ದಾರೆ. ಮಮತಾ ಪ್ರತೀಕಾರ ತೀರಿಸಿಕೊಳ್ಳಲು ಹಿಂಸಾಚಾರಕ್ಕೆ ಮುಂದಾಗಿದ್ದಾರೆ, ಆದರೆ ನಾನು ನನ್ನ ಮತಚಲಾವಣೆ ಮಾಡುತ್ತೇನೆ ಎಂದು ಬಿಜೆಪಿ ನಾಯಕಿ ಬಾಬುಲ್ ಸುಪ್ರಿಯೊ ಆರೋಪಿಸಿದ್ದಾರೆ.