![20BGBLASTPG1](http://kannada.vartamitra.com/wp-content/uploads/2019/05/20BGBLASTPG1-508x381.jpg)
ಬೆಂಗಳೂರು, ಮೇ 19- ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಅವರ ನಿವಾಸದ ಬಳಿ ನಿಗೂಢ ಸ್ಫೋಟ ಸಂಭವಿಸಿ ವ್ಯಕ್ತಿಯೊಬ್ಬರ ದೇಹ ಛಿದ್ರಗೊಂಡು ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.
ವಯ್ಯಾಲಿಕಾವಲ್‍ನ 11ನೆ ಬಿ ಕ್ರಾಸ್ ಬಳಿ ಇರುವ ಮುನಿರತ್ನ ಅವರ ಒಡೆತನದ ಕಟ್ಟಡದ ಕಾರ್‍ಪಾರ್ಕಿಂಗ್ ಬಳಿ ಈ ಸ್ಫೋಟ ಸಂಭವಿಸಿದೆ.
ಸ್ಫೋಟದಲ್ಲಿ ಮೃತಪಟ್ಟಿರುವ ವ್ಯಕ್ತಿಯನ್ನು ವೆಂಕಟೇಶ್ (56) ಎಂದು ಗುರುತಿಸಲಾಗಿದೆ. ಇದೇ ಪ್ರದೇಶದಲ್ಲಿ ಇವರು ಧೋಬಿ ಕೆಲಸ ಮಾಡುತ್ತಿದ್ದರು.
ಇಂದು ಬೆಳಗ್ಗೆ ಸುಮಾರು 9.30ರ ಸಂದರ್ಭದಲ್ಲಿ ಭಾರೀ ಸ್ಫೋಟದ ಸದ್ದು ಕೇಳಿಸಿದ್ದು, ಸುತ್ತಮುತ್ತಲಿನ ಸುಮಾರು ಒಂದು ಕಿಲೋ ಮೀಟರ್ ಪ್ರದೇಶದ ಜನರು ಬೆಚ್ಚಿಬಿದ್ದಿದ್ದಾರೆ.
ಏನಾಯಿತೋ ಏನೋ ಎಂದು ತಿಳಿಯುವಷ್ಟರಲ್ಲಿ ಮುನಿರತ್ನ ಅವರ ನಿವಾಸದ ಬಳಿ ವ್ಯಕ್ತಿಯೊಬ್ಬರ ದೇಹ ಛಿದ್ರ ಛಿದ್ರವಾಗಿ ಬಿದ್ದಿರುವುದನ್ನು ನೋಡಿ ಸ್ಥಳೀಯರು ಆತಂಕಗೊಂಡಿದ್ದಾರೆ.
ಸ್ಫೋಟವಾದ ಸ್ಥಳದಲ್ಲಿ ಸ್ವಲ್ಪ ಗುಂಡಿ ಸಹ ಉಂಟಾಗಿದೆ. ಇದರಿಂದ ಸ್ಫೋಟದ ತೀವ್ರತೆ ಎಷ್ಟಿತ್ತೆಂಬುದು ತಿಳಿಯುತ್ತದೆ.
ಪೊಲೀಸರ ದೌಡು: ಸಮೀಪದಲ್ಲೇ ಇರುವ ವಯ್ಯಾಲಿಕಾವಲ್ ಠಾಣೆ ಪೊಲೀಸರು ಸ್ಥಳಕ್ಕೆ ದಾವಿಸಿ ಪ್ರದೇಶವನ್ನು ತಮ್ಮ ವಶಕ್ಕೆ ಪಡೆದು ಘಟನೆ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ನಗರ ಪೊಲೀಸ್ ಆಯುಕ್ತ ಸುನಿಲ್‍ಕುಮಾರ್, ಹೆಚ್ಚುವರಿ ಪೊಲೀಸ್ ಆಯುಕ್ತ ಬಿ.ಕೆ.ಸಿಂಗ್ ಇನ್ನು ಮುಂತಾದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಸುನಿಲ್‍ಕುಮಾರ್ ಅವರು, ಸ್ಫೋಟಕ್ಕೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಭೇಟಿ ನೀಡಿ ತನಿಖೆ ನಡೆಸಲಿದ್ದಾರೆ. ನಂತರ ನಿಖರವಾದ ಕಾರಣ ತಿಳಿಯಲಿದೆ. ಪ್ರಾಥಮಿಕ ಹಂತದಲ್ಲೇ ನಾವು ನಿಖರವಾಗಿ ಏನೂ ಹೇಳಲು ಸಾಧ್ಯವಿಲ್ಲ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುವುದಾಗಿ ತಿಳಿಸಿದರು.
ಸ್ಫೋಟಕ್ಕೆ ಯಾವುದಾದರೂ ರಾಸಾಯನಿಕ ವಸ್ತು ಬಳಸಲಾಗಿದೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ. ಸ್ಫೋಟದಿಂದ ಮನೆಯ ಕಿಟಕಿ, ಗಾಜುಗಳು ಮತ್ತಿತರ ವಸ್ತುಗಳು ಹಾನಿಯಾಗಿವೆ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುವುದು. ಸಾರ್ವಜನಿಕರು ಈ ಬಗ್ಗೆ ಭಯಭೀತರಾಗುವುದು ಬೇಡ. ಅನಗತ್ಯವಾಗಿ ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು ಎಂದು ಸುನಿಲ್‍ಕುಮಾರ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಸ್ಫೋಟದಲ್ಲಿ ಮೃತಪಟ್ಟ ವೆಂಕಟೇಶ್ ಅವರು ಕೈನಲ್ಲಿ ಒಂದು ಕ್ಯಾನ್ ಹಿಡಿದುಕೊಂಡು ಬರುತ್ತಿದ್ದರು ಎಂದು ಪ್ರತ್ಯಕ್ಷ ದರ್ಶಿಗಳಿಂದ ತಿಳಿದುಬಂದಿದೆ. ಈ ಕ್ಯಾನ್‍ನಲ್ಲಿದ್ದ ರಾಸಾಯನಿಕ ದ್ರಾವಣದಿಂದ ಸ್ಫೋಟ ಸಂಭವಿಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವಿಧಿ-ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಸಹ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ತನಿಖೆ ಪೂರ್ಣಗೊಂಡ ನಂತರ ಸ್ಫೋಟ ಹೇಗಾಗಿದೆ, ಯಾವ ವಸ್ತುವಿನಿಂದ ಸ್ಫೋಟ ಉಂಟಾಗಿದೆ ಎಂದು ತಿಳಿಯಲಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಮುನಿರತ್ನ ಹೇಳಿಕೆ: ರಾಜಕಾರಣಿ ಮನೆ ಬಳಿ ಸ್ಫೋಟ ಸಂಭವಿಸಿದೆ ಎಂಬ ಕಾರಣಕ್ಕೆ ಏನೇನೋ ಊಹಾಪೋಹ ಕಲ್ಪಿಸುವುದು ಬೇಡ ಎಂದು ಶಾಸಕ ಮುನಿರತ್ನ ಮನವಿ ಮಾಡಿದ್ದಾರೆ.
ತಮ್ಮ ನಿವಾಸದ ಬಳಿ ಸ್ಫೋಟ ಸಂಭವಿಸಿದ ಬಗ್ಗೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಘಟನೆಯಲ್ಲಿ ವೆಂಕಟೇಶ್ ಮೃತಪಟ್ಟಿರುವುದು ನನಗೆ ಬಹಳ ನೋವು ತಂದಿದೆ.
ವೆಂಕಟೇಶ್ ತಂದೆ ಹಾಗೂ ನನ್ನ ತಂದೆಯವರು ಬಾಲ್ಯ ಸ್ನೇಹಿತರು. ಅವರು ಧೋಬಿ ಸಮಾಜದವರು, ನಾವೆಲ್ಲ ಜೊತೆಗೆ ಬೆಳೆದವರು. ವೆಂಕಟೇಶ್‍ಗೆ ಹೀಗಾಗಿರುವುದು ನನಗೆ ತುಂಬಾ ದುಃಖ ತಂದಿದೆ. ಹಾಗಾಗಿ ನಾನು ಹೆಚ್ಚಿಗೆ ಏನನ್ನೂ ಮಾತನಾಡುವುದಿಲ್ಲ. ಸಂಪೂರ್ಣ ತನಿಖೆಯಾಗುವವರೆಗೂ ಕಾದು ನೋಡೋಣ ಎಂದು ಅವರು ಹೇಳಿದರು.