
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿರುವ ರಾಜ್ಯ ನಾಯಕರು, ಪ್ರಸ್ತುತ ಮೈತ್ರಿ ಸರ್ಕಾರದ ಗೊಂದಲಗಳು, ನಾಯಕರ ಪರ-ವಿರೋಧ ಹೇಳಿಕೆಗಳು ಮತ್ತು ಲೋಕಸಭೆ ಚುನಾವಣೆ ಕುರಿತು ಮಹತ್ವದ ಚರ್ಚೆ ನಡೆಸಿದ್ದಾರೆ.
ಸಿದ್ದರಾಮಯ್ಯ, ಜಿ.ಪರಮೇಶ್ವರ್, ದಿನೇಶ್ ಗುಂಡೂರಾವ್ ಹಾಗೂ ಡಿ.ಕೆ. ಶಿವಕುಮಾರ್ ಅವರು ದೆಹಲಿಯ ತುಘಲಕ್ ಮಾರ್ಗದಲ್ಲಿರುವ ರಾಹುಲ್ ಗಾಂಧಿ ನಿವಾಸದಲ್ಲಿ ಅವರನ್ನು ಭೇಟಿಯಾಗಿ ಸಭೆ ನಡೆಸಿದರು.
ಭೇಟಿ ವೇಳೆ ರಾಜ್ಯದ ಲೋಕಸಭಾ ಚುನಾವಣೆ ಬಗ್ಗೆ ಚರ್ಚೆ ಮಾಡಲಾಗಿದೆ. ಹಾಗೆಯೇ ರಾಜ್ಯದ ಮೈತ್ರಿ ಸರ್ಕಾರದ ಸ್ಥಿತಿಗತಿ ಬಗ್ಗೆ ಸಮಾಲೋಚನೆಯನ್ನು ನಡೆಸಲಾಗಿದ್ದು, ಜೆಡಿಎಸ್ ನಾಯಕರಾದ ವಿಶ್ವನಾಥ್, ಬಸವರಾಜ ಹೊರಟ್ಟಿ, ಕುಪ್ಪೇಂದ್ರ ರೆಡ್ಡಿ ಹೇಳಿಕೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಇದರ ಜೊತೆಗೆ ಮುಂದಿನ ಕಾರ್ಯತಂತ್ರಗಳ ಕುರಿತು ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಸಲಹೆ ಕೇಳಿದ್ದಾರೆ.
ಸಭೆ ಬಳಿಕ ಮಾತನಾಡಿದ ದಿನೇಶ್ ಗುಂಡೂರಾವ್, ನಮ್ಮದು ಸ್ಥಿರ ಸರ್ಕಾರ. ಯಾವುದೇ ಅನುಮಾನ ಇಲ್ಲ. ಎರಡು ಕ್ಷೇತ್ರಗಳ ಉಪ ಚುನಾವಣೆ ಗೆಲ್ಲುತ್ತೇವೆ. ಕೇಂದ್ರದಲ್ಲಿ ಬೇರೆ ಸರ್ಕಾರ ಅಧಿಕಾರಕ್ಕೆ ಬರಲಿದೆ. ನಮ್ಮ ಪಕ್ಷದ ಶಿಸ್ತು ಕಾಪಾಡುವುದು ಮುಖ್ಯ. ಇದರ ಬಗ್ಗೆಯೂ ರಾಹುಲ್ ಗಾಂಧಿ ಜೊತೆ ಚರ್ಚಿಸಿದ್ದೇವೆ. ಬಹಿರಂಗ ಹೇಳಿಕೆ ನೀಡದಂತೆ ಸೂಚನೆ ನೀಡಲಾಗಿದೆ. ಎರಡು ಪಕ್ಷಗಳ ಮುಖಂಡರು ಶಿಸ್ತು ಕಾಪಾಡಬೇಕು. ದೇವೇಗೌಡರು ಹೇಳಿದ್ದಾರೆ ಕಾಂಗ್ರೆಸ್ ಜೊತೆಗಿದ್ದೇವೆ ಅಂತಾ. ಪದೇ ಪದೇ ಅನುಮಾನದಿಂದ ನೋಡುವುದು ತಪ್ಪಾಗುತ್ತೆ. ಶಿಸ್ತು ಉಲ್ಲಂಘಿಸುವ ನಾಯಕರಿಗೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲವನ್ನು ಸಹಿಸಿಕೊಂಡಿದ್ದೇವೆ. ಇನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಸಮನ್ವಯ ಸಮಿತಿ ಸಭೆಗೆ ವಿಶ್ವನಾಥ್ ಅವರನ್ನು ಸೇರಿಸಿಕೊಳ್ಳುವ ಬಗ್ಗೆ ಚರ್ಚೆ ಮಾಡಿಲ್ಲ ಎಂದು ತಿಳಿಸಿದರು.