ಜೆಡಿಎಸ್ ಪಾಲಿಗೆ ಪ್ರತಿಷ್ಠೆಯ ವಿಷಯವಾಗಿರುವ ಚುನಾವಣೆ

ಹಾಸನ, ಮೇ 19- ಲೋಕ ಸಮರದ ಫಲಿತಾಂಶಕ್ಕೆ ದಿನಗಣನೆ ಪ್ರಾರಂಭವಾಗಿದ್ದು, ಕಳೆದ ಹಲವು ಚುನಾವಣೆಗೆ ಹೋಲಿಸಿದರೆ ಈ ಬಾರಿಯ ಲೋಕ ಚುನಾವಣೆ ವಿಶೇಷ ಮಹತ್ವ ಪಡೆದಿದೆ.

ಅದರಲ್ಲೂ ಹಾಸನ ಜಿಲ್ಲೆಯ ಮಟ್ಟಿಗೆ ಈ ಚುನಾವಣೆ ಫಲಿತಾಂಶ ಜೆಡಿಎಸ್ ಪಾಲಿಗೆ ಪ್ರತಿಷ್ಠೆಯ ವಿಷಯವಾಗಿ ಪರಿಣಮಿಸಿದೆ ಎಂದರೆ ತಪ್ಪಾಗಲಾರದು.

ಸ್ವತಃ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸ್ವಕ್ಷೇತ್ರ ತೊರೆದು ತುಮಕೂರಿನಿಂದ ಸ್ಪರ್ಧಿಸಿದ್ದಾರೆ. ಹಾಸನದಲ್ಲಿ ತಮ್ಮ ಮೊಮ್ಮಗನನ್ನು ಸ್ಪರ್ಧೆಗಿಳಿಸಿ ಭವಿಷ್ಯದ ನಾಯಕನನ್ನಾಗಿಸಲು ಮುಂದಾಗಿದ್ದಾರೆ.

ಜೆಡಿಎಸ್ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಮತ್ತು ಆರು ಶಾಸಕರನ್ನು ಹೊಂದಿರುವ ಕ್ಷೇತ್ರದಲ್ಲಿ ತಮ್ಮ ಮೊಮ್ಮಗ ಪ್ರಜ್ವಲ್ ಗೆಲುವು ಅಷ್ಟೇನೂ ಕಠಿಣವಾಗಲಾರದು ಎಂಬ ಲೆಕ್ಕಾಚಾರ ಗೌಡರದಾಗಿತ್ತು. ಫಲಿತಾಂಶ ನಮ್ಮ ಪರವೇ ಬರಲಿದೆ ಎಂದು ದೇವೇಗೌಡರು, ಪ್ರಜ್ವಲï ತಂದೆ ರೇವಣ್ಣ ಹಾಗೂ ತಾಯಿ ಭವಾನಿ ಆತ್ಮವಿಶ್ವಾಸದಲ್ಲಿದ್ದಾರೆ.ಕನಿಷ್ಠ ಎರಡು ಲಕ್ಷ ಮತಗಳ ಅಂತರದಲ್ಲಿ ಪ್ರಜ್ವಲ್ ಗೆಲುವು ನಿಶ್ಚಿತ ಎಂದು ಹೇಳಿಕೆ ನೀಡಿದ್ದಾರೆ.ಜೆಡಿಎಸ್ ಕಾರ್ಯಕರ್ತರು ಶಾಸಕರು ಸಹ ಇದೆ ಮಾತನ್ನು ಹೇಳುತ್ತಿದ್ದಾರೆ .

ಇನ್ನು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ವಿರುದ್ಧ ಕಾಂಗ್ರೆಸ್‍ನಿಂದ ಹೊರಬಂದು ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸಿರುವ ಎ.ಮಂಜು ಈ ಚುನಾವಣೆಯಲ್ಲಿ ತೀವ್ರ ಸ್ಪರ್ಧೆ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಹಲವು ದಶಕದ ಹಿಂದೆ ಬಿಜೆಪಿಗೆ ಇದ್ದ ಬೆಂಬಲ ಈ ಬಾರಿ ಜಿಲ್ಲೆಯಲ್ಲಿ ದೊರೆಯಲಿದೆ ಎಂದು ಹೇಳಲಾಗುತ್ತಿದೆ. ಸಾಂಪ್ರದಾಯಿಕ ಬಿಜೆಪಿ ಮತಗಳು, ಮೈತ್ರಿ ಮತ್ತು ಕುಟುಂಬ ರಾಜಕಾರಣ ವಿರುದ್ಧದ ಮತಗಳು ಮಂಜು ಪರ ಚಲಾವಣೆಯಾದರೆ ಮೈತ್ರಿ ಅಭ್ಯರ್ಥಿ ಗೆಲುವು ಸುಲಭವಾಗದು ಎಂದು ಚುನಾವಣಾ ಪೂರ್ವ ಸಮೀಕ್ಷೆಯಿಂದ ತಿಳಿದಿದ್ದ ಮಂಜು ಸ್ಪರ್ಧೆಗೆ ಮುಂದಾಗಿ ಪ್ರಚಾರ, ಚುನಾವಣೆ ಬಳಿಕ ನನ್ನ ಗೆಲುವು ಶತಸಿದ್ಧ ಎಂಬ ಆತ್ಮವಿಶ್ವಾಸದಲ್ಲಿ ಇದ್ದಾರೆ.

ಬೇಲೂರು, ಅರಸೀಕೆರೆ, ಕಡೂರು ವಿಧಾನಸಭೆ ಕ್ಷೇತ್ರದಲ್ಲಿನ ಬಿಜೆಪಿ ಮತಗಳು ಕೆಲ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಅಸಮಾಧಾನದ ಕಾರಣ ಮೈತ್ರಿಗೆ ಒಪ್ಪದೆ ಜೆಡಿಎಸ್‍ಗೆ ಮತ ಹಾಕದಿರುವ ಸನ್ನಿವೇಶ ಸೃಷ್ಟಿಯಾಗಿದ್ದರೂ ಸಹ ಕಾಂಗ್ರೆಸ್‍ನ ಸಾಂಪ್ರದಾಯಿಕ ಮತಗಳು ಯಾವ ಅಭ್ಯರ್ಥಿಗೆ ಚಲಾವಣೆಯಾಗಿದೆ ಎಂಬ ಗೊಂದಲ ಮುಂದುವರೆದಿದೆ ಹಾಗೂ ಇವರು ತಟಸ್ಥ ವಾಗಿದ್ದರೆ ಇದರ ವ್ಯತಿರಿಕ್ತ ಪರಿಣಾಮ ಯಾವ ಅಭ್ಯರ್ಥಿಗೆ ಕೆಡುಕಾಗಲಿದೆ ಎಂಬ ರಾಜಕೀಯ ಲೆಕ್ಕಾಚಾರವು ನಡೆದಿದೆ.

ಈ ಇಬ್ಬರಿಗೂ ಮತಗಳನ್ನು ಹಾಕಲಾಗದವರು ನೋಟಾ ಬಟನ್ ಒತ್ತಿರಬಹುದು ಅಥವಾ ತಟಸ್ಥ ರಾಗಿರಬಹುದು ಎಂಬ ಮಾತುಗಳು ಕೇಳಿಬಂದಿದೆ.

ಪ್ರಜ್ವಲ್ ಅಫಿಡವಿಟ್ ದೋಷ;
ಇನ್ನು ಮೂರನೇ ತಲೆಮಾರಾದ ದೇವೇಗೌಡರ ಮೊಮ್ಮಗ ಪ್ರಜ್ವಲï ನಾಮಪತ್ರ ಸಲ್ಲಿಕೆ ವೇಳೆ ಯಟವಟ್ಟು ಮಾಡಿಕೊಂಡಿದ್ದು ಇದರಿಂದ ಫಲಿತಾಂಶದ ಬಳಿಕ ಬಾರಿ ದಂಡ ತೆರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರಮಾಣ ಪತ್ರದಲ್ಲಿ ಹಲವು ಸಂಗತಿ ಮರೆಮಾಚಲಾಗಿದೆ ಎಂದು ಎ.ಮಂಜು ಆರೋಪಿಸಿ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಈ ಕುರಿತು ಆಯೋಗ ಗಂಭೀರ ಕ್ರಮವನ್ನು ಜರುಗಿಸಲಿದೆ ಎಂದು ಹೇಳಲಾಗುತ್ತಿದೆ.ಆದರೆ ಇದಕ್ಕೆಲ್ಲಾ ಡೋಂಟ್ ಕೇರ್ ಎಂದಿರುವ ಪ್ರಜ್ವಲï ತಂದೆ ಲೋಕೋಪಯೋಗಿ ಸಚಿವರಾದ ಎಚ್.ಡಿ.ರೇವಣ್ಣ ಒಮ್ಮೆ ಜಿಲ್ಲಾ ಚುನಾವಣಾಕಾರಿಯಿಂದ ಅಂಗೀಕಾರವಾದ ನಾಮಪತ್ರ ಯಾವುದೇ ಕಾರಣಕ್ಕೂ ಪ್ರಶ್ನಿಸಲು ಬರುವುದಿಲ್ಲಾ ಎಂದು ದಾಖಲೆ ಸಮೇತ ವಿವರಿಸಿದ್ದಾರೆ.

ಎ.ಮಂಜು ಅವರು ಮೋದಿ ಅಲೆ, ಬಿಜೆಪಿ ಸಾಂಪ್ರದಾಯಿಕ ಮತ ಹಾಗೂ ಮೈತ್ರಿ ವಿರುದ್ಧದ ಮತ ನೆಚ್ಚಿಕೊಂಡು ಸ್ಪರ್ಧೆ ಮುಗಿಸಿ ಫಲಿತಾಂಶಕ್ಕೆ ಕಾಯುತ್ತಿದ್ದರೆ, ಜೆಡಿಎಸ್- ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲï ತಮ್ಮ ತಾತ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ತಂದೆ ರೇವಣ್ಣ, ತಾಯಿ ಭವಾನಿ ಮಾರ್ಗದರ್ಶನದಲ್ಲಿ ಹಾಗೂ ಜೆಡಿಎಸ್ ಶಾಸಕರು ಮತ್ತು ಮೈತ್ರಿ ಪಕ್ಷದ ಬೆಂಬಲದೊಂದಿಗೆ ಚುನಾವಣೆ ಮುಗಿಸಿ ಫಲಿತಾಂಶಕ್ಕೆ ಕಾಯುತ್ತಿದ್ದಾರೆ. ವಿಜಯಲಕ್ಷ್ಮಿ ಯಾರಿಗೆ ಒಲಿಯುವಳೋ ಕಾದುನೋಡಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ