ಬೆಂಗಳೂರು, ಮೇ 19- ಬೇಸಿಗೆ ರಜೆ ಅವಧಿ ಇಂದಿಗೆ ಮುಕ್ತಾಯವಾಗಿದ್ದು, ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿಗಳು ನಾಳೆಯಿಂದ ಆರಂಭವಾಗಲಿವೆ.
ಪದವಿ ಪೂರ್ವ ಶಿಕ್ಷಣ ಇಲಾಖೆ 2019-20ನೆ ಸಾಲಿನ ಶೈಕ್ಷಣಿಕ ಅವಧಿಗೆ ವೇಳಾಪಟ್ಟಿ ನಿಗದಿಪಡಿಸಿದ್ದು, ಅದರಂತೆ ಮೇ 20ರಂದು ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿಗಳನ್ನು ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ಪ್ರಾರಂಭಿಸಬೇಕಾಗಿದೆ.
ಎಸ್‍ಎಸ್‍ಎಲ್‍ಸಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು ಈಗಾಗಲೇ ತಮಗಿಷ್ಟವಾದ ಕಾಲೇಜುಗಳಲ್ಲಿ ಪ್ರವೇಶ ಪಡೆಯುತ್ತಿದ್ದಾರೆ. ನಾಳೆಯಿಂದ ಪಿಯುಸಿ ತರಗತಿಗಳು ಪ್ರಾರಂಭವಾಗಲಿವೆ.
ಈಗಾಗಲೇ ದ್ವಿತೀಯ ಪಿಯುಸಿ ತರಗತಿಗಳು ಬಹಳಷ್ಟು ಖಾಸಗಿ ಕಾಲೇಜುಗಳಲ್ಲಿ ಆರಂಭವಾಗಿವೆ.
ಮೊದಲ ಶೈಕ್ಷಣಿಕ ಅವಧಿಯು ಮೇ 20 ರಿಂದ ಸೆಪ್ಟೆಂಬರ್ 27ರ ವರೆಗೂ ನಿಗದಿಪಡಿಸಲಾಗಿದೆ. ಎರಡನೆ ಅವಧಿಯನ್ನು ಅಕ್ಟೋಬರ್ 14 ರಿಂದ ಮಾರ್ಚ್ 19ರ ವರೆಗೆ ನಿಗದಿಪಡಿಸಲಾಗಿದೆ.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 13ರ ವರೆಗೂ ಮಧ್ಯಂತರ ರಜೆ ಘೋಷಿಸಿದರು. ಹಾಗೆಯೇ ಮಾರ್ಚ್ 20 ರಿಂದ ಮೇ 19ರ ವರೆಗೆ ಬೇಸಿಗೆ ರಜೆ ನೀಡಲಾಗಿದೆ.
ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟವಾದ ಏಳು ದಿನಗಳ ಅವಧಿಯನ್ನು ದಂಡ ಶುಲ್ಕವಿಲ್ಲದೆ ವಿದ್ಯಾರ್ಥಿಗಳಿಗೆ ಪಿಯುಸಿಗೆ ದಾಖಲಾಗುವ ಅವಕಾಶ ಕಲ್ಪಿಸಲಾಗಿದೆ.