ಪಾಟ್ನಾ: ಸಾದ್ವಿ ಪ್ರಜ್ನಾ ಸಿಂಗ್ ನಾಥುರಾಮ್ ಗೋಡ್ಸೆ ಪರ ನಿದಿದ ಹೇಳಿಕೆ ಖಂಡಿಸಿರುವ ಬಿಹಾರ ಸಿಎಂ ನಿತೀಶ್ ಕುಮಾರ್, ಪ್ರಜ್ನಾರನ್ನು ಬಿಜೆಪಿಯಿಂದ ವಜಾಗೊಳಿಸಬೇಕು ಎಂದಿದ್ದಾರೆ.
ಬಿಹಾರ ಸಿಎಂ, ಜೆಡಿಯು ಮುಖ್ಯಸ್ಥರಾದ ನಿತೀಶ್ ಕುಮಾರ್ ತಮ್ಮ ಪುತ್ರ ನಿಶಾಂತ್ ಜತೆ ಸೇರಿ ಪಟ್ನಾ ಸಾಹೇಬ್ ಲೋಕಸಭಾ ಕ್ಷೇತ್ರದ ದಿಘಾ ಅಸೆಂಬ್ಲಿ ವ್ಯಾಪ್ತಿಯ ರಾಜ್ ಭವನ್ ವಸತಿ ಪ್ರದೇಶದ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಇದೇ ಮೊದಲ ಬಾರಿಗೆ ನಿತೀಶ್ ಕುಮಾರ್ ಪಟ್ನಾದಲ್ಲಿ ಪುತ್ರನೊಡನೆ ಮತ ಚಲಾಯಿಸಿದ್ದು 2014ರವರೆಗೂ ಅವರು ತಮ್ಮ ಹುಟ್ಟೂರಾದ ಭಕತಿಯಾರ್ ಪುರ್ ನಲ್ಲಿಯೇ ಮತದಾನ ಮಾಡುತ್ತಿದ್ದರು.
ಮತದಾನದ ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದ ನಿತೀಶ್ ಕುಮಾರ್, ಪ್ರಜ್ನಾ ಠಾಕೂರ್ ಗೋಡ್ಸೆ ಪರ ವಕಾಲತ್ತು ವಹಿಸಿದ್ದು ಆಕ್ಷೇಪಾರ್ಹ ಅಪರಾಧ. ಆಕೆಯನ್ನು ಬಿಜೆಪಿಯಿಂದ ವಜಾಗೊಳಿಸಬೇಕು ಎಂದರು.
ಇನ್ನು ಚುನಾವಣೆ ಅವಧಿ ಸುದೀರ್ಘವಾಗಿರಬಾರದು. ಎರಡು ಹಂತಗಳ ನಡುವೆ ದೊಡ್ಡ ಅಂತರವಿರುವುದು ಒಳ್ಳೆಯದಲ್ಲ ಎಂದು ಅಭಿಪ್ರಾಯಪಟ್ಟ ಬಿಹಾರ ಸಿಎಂ ಮುಂದಿನ ದಿನದಲ್ಲಿ ಈ ರೀತಿಯಾಗದಂತೆ ಗಮನಿಸಬೇಕು. ಇದಕ್ಕಾಗಿ ಚುನಾವಣಾ ಆಯೋಗಕ್ಕೆ ಎಲ್ಲಾ ಪಕ್ಷಗಳೂ ಒಟ್ಟಾಗಿ ಮನವಿ ಪತ್ರ ಸಲ್ಲಿಸಲು ಕರೆ ನೀಡಿದ್ದಾರೆ. ಮತದಾರರ ಅನುಕೂಲಕ್ಕಾಗಿ ಚುನಾವಣೆಯನ್ನು ಶೀಘ್ರವೇ ಮುಗಿಸಬೇಕು ಎಂದುಹೇಳಿದರು.
ಇದೇ ವೇಳೆ ಜನತೆ ದೇಶದ ಭವಿಷ್ಯವನ್ನು ಬುದ್ದಿವಂತಿಕೆಯಿಂದ ತೀರ್ಮಾನಿಸಲಿದ್ದಾರೆ ಎಂದೂ ಹೇಳಿದ್ದಾರೆ.






