ನವದೆಹಲಿ: ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನ ನಾಳೆ ನಡೆಯಲಿದೆ. ಭಾನುವಾರ(ಮೇ.19) ನಡೆಯಲಿರುವ ಮತದಾನಕ್ಕೆ ಕೇಂದ್ರ ಚುನಾವಣಾ ಆಯೋಗ ಸಕಲ ಸಿದ್ದತೆ ಮಾಡಿಕೊಂಡಿದೆ. ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಮಧ್ಯಪ್ರದೇಶ, ಪಂಜಾಬ್ ಸೇರಿದಂತೆ ಕೆಲವು ಈಶಾನ್ಯ ರಾಜ್ಯಗಳ 59 ಕ್ಷೇತ್ರಗಳಿಗೆ ಮತದಾನ ಆಗಲಿದೆ. ಅಂತೆಯೇ ಮೇ 23ಕ್ಕೆ ಫಲಿತಾಂಶ ಪ್ರಕಟವಾಗಲಿದೆ.
ಕೊನೆಯ ಹಂತದ ಮತದಾನ ಆಗಿರುವುದರಿಂದ ನಿನ್ನೆ ಶುಕ್ರವಾರ ಸಂಜೆಯೇ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಈ ಬೆನ್ನಲ್ಲೇ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಸುದ್ದಿಗೋಷ್ಠಿ ನಡೆಸಿದ್ದು, ಮತದಾರರಿಗೆ ಧನ್ಯವಾದ ತಿಳಿಸಿದ್ದಾರೆ. ಇತ್ತ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಜನರಿಗೆ ಧನ್ಯವಾದ ಹೇಳಿದರೆ, ಅತ್ತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಕೂಡ ಜನರಿಗೆ ವಂದನೆ ಅರ್ಪಿಸಿದ್ದಾರೆ.
ಲೋಕಸಭಾ ಕ್ಷೇತ್ರಗಳ ಜತೆಗೆ ರಾಜ್ಯದಲ್ಲೂ ಕುಂದಗೋಳ ಮತ್ತು ಚಿಂಚೋಳಿ ಉಪಚುನಾವಣೆ ನಡೆಯಲಿದೆ. ಇಲ್ಲಿ ಕೂಡ ಪ್ರಚಾರ ಮುಗಿಸಿರುವ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಾಯಕರು ತಮ್ಮತಮ್ಮ ಊರುಗಳಿಗೆ ವಾಪಸ್ ತೆರಳಿದ್ದಾರೆ.
ಈ ಹಿಂದೆ ಕಳೆದ ಮೇ 12ರಂದು 6ನೇ ಹಂತದ ಚುನಾವಣೆ ಮತದಾನ ಪ್ರಕ್ರಿಯೆ ಪೂರ್ಣಗೊಂಡಿತ್ತು. ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದಂತೆ ಒಟ್ಟು 7 ರಾಜ್ಯಗಳ 59 ಲೋಕಸಭಾ ಕ್ಷೇತ್ರಗಳಿಗೆ ಮತದಾನವಾಗಿತ್ತು. ಆರನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಒಟ್ಟಾರೆ ಸರಾಸರಿ 62.27% ಮತದಾನ ದಾಖಲಾಗಿತ್ತು.