![kamal-haasan01](http://kannada.vartamitra.com/wp-content/uploads/2019/05/kamal-haasan01-673x381.jpg)
ಕೊಯಮತ್ತೂರು: ಗೋಡ್ಸೆ ಮೊದಲ ಹಿಂದೂ ಉಗ್ರ ಎಂದು ಹೇಳಿ ಸುದ್ದಿಗೆ ಗ್ರಾಸವಾಗಿದ್ದ ನಟ ಹಾಗೂ ಮಕ್ಕಳ್ ನೀಧಿ ಮಯ್ಯಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಮೇಲೆ ನಿನ್ನೆ ಚಪ್ಪಲಿ ತೂರಿದ ಘಟನೆ ಹಸಿರಾಗಿರುವಂತೆಯೇ ಇಂದು ಮೊಟ್ಟೆ ತೂರಲಾಗಿದೆ.
ಸೂಳೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನಿಮಿತ್ತ ಅರವಕುರಿಚ್ಚಿಯಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಕಮಲ್ ಹಾಸನ್ ಪಾಲ್ಗೊಂಡಿದ್ದರು. ಈ ವೇಳೆ ಕಿಡಿಗೇಡಿಗಳು ಅವರ ಮೇಲೆ ಮೊಟ್ಟೆ ಎಸೆದಿದ್ದಾರೆ. ಅಲ್ಲದೆ ಕಮಲ್ ಹಾಸನ್ ಕುಳಿತಿದ್ದ ವೇದಿಕೆಯತ್ತ ಕಲ್ಲು ತೂರಾಟ ನಡೆಸಲಾಗಿದೆ.
ಘಟನೆಯಲ್ಲಿ ನಟ ಕಮಲ್ ಹಾಸನ್ ಸೇರಿದಂತೆ ಯಾರಿಗೂ ಯಾವುದೇ ರೀತಿಯ ಹಾನಿಯಾಗಿಲ್ಲ. ಸ್ಥಳದಲ್ಲಿದ್ದ ಪೊಲೀಸರು ಕೂಡಲೇ ಕಾರ್ಯ ಪ್ರವೃತ್ತರಾಗಿ ಕಮಲ್ ಹಾಸನ್ ರನ್ನು ಸುರಕ್ಷಿತವಾಗಿ ಬೇರೆಡೆ ರವಾನೆ ಮಾಡಿದ್ದಾರೆ. ಇನ್ನು ಸ್ಥಳದಲ್ಲಿದ್ದ ಎಂಎನ್ ಎಂ ಕಾರ್ಯಕರ್ತರು ಕಲ್ಲು ಮೊಟ್ಟೆ ತೂರಿದ ಇಬ್ಬರು ಶಂಕಿತರನ್ನು ಹಿಡಿದು ಹಲ್ಲೆಗೆ ಮುಂದಾಗಿದ್ದಾರೆ. ಕೂಡಲೇ ಪೊಲೀಸರು ಅವರನ್ನು ವಶಕ್ಕೆ ಪಡೆದು ರಕ್ಷಿಸಿದ್ದಾರೆ. ಅಲ್ಲದೆ ವಿಚಾರಣೆ ಬಳಿಕ ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ.
ಪೊಲೀಸರ ಕ್ರಮವನ್ನು ವಿರೋಧಿಸಿ ಎಂಎನ್ ಎಂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ನಿನ್ನೆಯಷ್ಟೇ ಕಿಡಿಗೇಡಿಗಳು ನಟ ಕಮಲ್ ಹಾಸನ್ ರತ್ತ ಚಪ್ಪಲಿ ತೂರಿದ್ದರು. ತಮಿಳುನಾಡಿನ ತಿರುಪ್ಪರಂಕುಂಡ್ರಮ್ ವಿಧಾನಸಭೆ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿತ್ತು.