ಅಂತರ್ಜಾಲದಲ್ಲಿ ಭಾರಿ ಸದ್ದು ಮಾಡುತ್ತಿರುವ ನಾಥೂರಾಮ್ ಗೋಡ್ಸೆ ಕುರಿತ ಟ್ವೀಟ್

ಬೆಂಗಳೂರು, ಮೇ 17- ನಿನ್ನೆ ಮುಖ್ಯಮಂತ್ರಿ ಹುದ್ದೆ ಕುರಿತು ಮಾಜಿ-ಹಾಲಿ ಮುಖ್ಯಮಂತ್ರಿಗಳ ನಡುವೆ ನಿನ್ನೆ ಟ್ವೀಟರ್ ವಾರ್ ನಡೆದಿದ್ದರೆ, ಇಂದು ನಾಥೂರಾಮ್ ಗೋಡ್ಸೆ ಕುರಿತು ಬಿಜೆಪಿ ಸಂಸದರು ಮಾಡಿರುವ ಟ್ವೀಟ್ ಅಂತರ್ಜಾಲದಲ್ಲಿ ಭಾರೀ ಸದ್ದು ಮಾಡಿದೆ.

ಬಿಜೆಪಿ ಅಭ್ಯರ್ಥಿ ಸಾದ್ವಿ ಪ್ರಜ್ಞಾ ಸಿಂಗ್, ಸಂಸದ ನಳೀನ್ ಕುಮಾರ್ ಕಟೀಲ್ ಅವರು ನಾಥೂರಾಮ್ ಗೋಡ್ಸೆ ಕುರಿತಂತೆ ಮಾಡಿದ ಟ್ವೀಟ್‍ಗಳು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿದ್ದು, ಕಾಂಗ್ರೆಸಿಗರು ಬಿಜೆಪಿಯ ನಾಯಕರ ಟ್ವೀಟ್ ವಿರುದ್ದ ಮುಗಿಬಿದ್ದಿದ್ದಾರೆ.

ಪರಿಸ್ಥಿತಿ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಮಧ್ಯಪ್ರವೇಶಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಎರಡು ದಿನಗಳಿಂದ ನಡೆಯುತ್ತಿರುವ ಟ್ವೀಟ್ ವಿವಾದವನ್ನು ಗಮನಿಸಿದ್ದೇನೆ. ಇದು ಅವರ ವೈಯಕ್ತಿಕ ವಿಚಾರ. ಪಕ್ಷಕ್ಕೂ ಅದಕ್ಕೂ ಸಂಬಂಧವಿಲ್ಲ. ಅವರ ಹೇಳಿಕೆಗಳ ಬಗ್ಗೆ ಪಕ್ಷದಲ್ಲಿ ಆಂತರಿಕ ತನಿಖೆ ನಡೆಸಲಾಗುವುದು. ಪ್ರಕರಣವನ್ನು ಶಿಸ್ತು ಸಮಿತಿಗೆ ಒಪ್ಪಿಸಲಾಗುವುದು ಎಂದು ಹೇಳುವ ಮೂಲಕ ವಿವಾದದಿಂದ ಜಾರಿಕೊಳ್ಳಲು ಯತ್ನಿಸಿದ್ದಾರೆ.

ಈ ಎಲ್ಲದಕ್ಕಿಂತ ಮೊದಲು ತಮಿಳುನಾಡಿನ ನಟ ಹಾಗೂ ರಾಜಕಾರಣಿ ಕಮಲಹಾಸನ್ ಅವರು, ನಾಥೂರಾಮ್ ಗೋಡ್ಸೆಯನ್ನು ದೇಶದ ಮೊದಲ ಹಿಂದೂ ಉಗ್ರ ಎಂದು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಅವರು, ನಾಥರಾಮ್ ಗೋಡ್ಸೆ ಅವರನ್ನು ದೇಶ ಭಕ್ತ ಎಂದು ಕರೆದಿದ್ದರು.

ಸಂಸದ ನಳೀನ್‍ಕುಮಾರ್ ಕಟೀಲ್ ಅವರು ನಾಥರಾಮ್ ಗೋಡ್ಸೆ ಕೊಂದವರ ಸಂಖ್ಯೆ 1, ಅಜ್ಮಲ್ ಕಸಬ್ ಕೊಂದವರ ಸಂಖ್ಯೆ 72, ರಾಜೀವ್‍ಗಾಂಧಿ ಕೊಂದವರ ಸಂಖ್ಯೆ 17 ಸಾವಿರ. ನೀವೇ ಹೇಳಿ ಇದರಲ್ಲಿ ಅತೀ ಕ್ರೂರ ಕೊಲೆಗಾರ ಯಾರು ಎಂದು ಪ್ರಶ್ನಿಸಿದ್ದರು. ಇದು ತೀವ್ರ ಟೀಕೆಗೆ ಗುರಿಯಾಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಟೀಲ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿ, ಗೋಡ್ಸೆ ಸಂಘಪರಿವಾರದ ಸಿದ್ದಾಂತದಿಂದ ಪ್ರೇರೇಪಿತರಾದವರು. ಈಗ ಪ್ರಜ್ಞಾ ಪ್ರೇರಿತಪಿತರಾಗಿದ್ದಾರೆ. ಈ ಮೊದಲು ಗೋಡ್ಸೆ ಮಹಾತ್ಮರನ್ನು ಕೊಂದ. ಈಗ ಮಹಾತ್ಮರ ಮಕ್ಕಳನ್ನು ಅರ್ಥಾತ್ ಅವರ ಆದರ್ಶಗಳನ್ನು ಕೊಲ್ಲಲಾಗುತ್ತಿದೆ.

ಗೋಡ್ಸೆ ದೇಶ ಭಕ್ತ ಎಂದು ಪ್ರಜ್ಞಾ ಹೇಳಿರುವ ಹೇಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಅನುಮೋದಿಸುತ್ತಾರೆಯೇ? ಅವರ ಸಿದ್ದಾಂತಗಳನ್ನು ಒಪ್ಪುತ್ತಾರೆಯೇ ಎಂದು ಪ್ರಶ್ನಿಸಿದರು.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ನರೇಂದ್ರ ಮೋದಿ ಅವರು ಮಹಾತ್ಮ ಗಾಂಧಿ ಪ್ರತಿಮೆಗೆ ಗೌರವ ಸಲ್ಲಿಸುತ್ತಾರೆ. ಅವರ ಬೆಂಬಲಿಗರು ಗಾಂಧಿ ಕೊಂದವರನ್ನು ದೇಶಭಕ್ತ ಎನ್ನುತ್ತಾರೆ. ಇಂತಹ ಗೊಂದಲವೇಕೆ? ಹೃದಯದಲ್ಲೊಂದು ಹೊರಗೊಂದು ನಡವಳಿಕೆಗಳನ್ನು ಏಕೆ ಅನುಸರಿಸಬೇಕು ಎಂದು ಪ್ರಶ್ನಿಸಿದ್ದಾರಲ್ಲದೆ, ನಳೀನ್‍ಕುಮಾರ್ ಕಟೀಲ್‍ನಂತವರಿಂದ ದೇಶಕ್ಕೆ ಆತಂಕವಿದೆ ಎಂದು ಎಚ್ಚರಿಸಿದರು.

ಉಪಮುಖ್ಯಮಂತ್ರಿ ಪರಮೇಶ್ವರ್ ಮಾತನಾಡಿ, ರಾಜೀವ್ ಗಾಂಧಿ ಅವರ ಬಗ್ಗೆ ಅಗೌರವದ ಮಾತುಗಳನ್ನಾಡಿ, ಮಹಾತ್ಮಗಾಂಧಿ ಕೊಂದ ಗೋಡ್ಸೆಯನ್ನು ನಳೀನ್‍ಕುಮಾರ್‍ಕಟೀಲ್ ಸಮರ್ಥಿಸಿಕೊಂಡಿದ್ದಾರೆ. ಅವರ ನಾಲಿಗೆ ಉದ್ದ ಆಗಿದೆ. ಅಮಿತ್ ಷಾ ಮತ್ತು ಪ್ರಧಾನಿ ನರೇಂದ್ರ ಮೋದಿ ಇಂಥವರಿಗೆ ಕಡಿವಾಣ ಹಾಕಬೇಕೆಂದರಲ್ಲದೆ, ಖುದ್ದು ಪ್ರಧಾನಿಯವರೇ ರಾಜೀವ್ ಗಾಂಧಿ ಅವರ ಬಗ್ಗೆ ಟೀಕಿಸಿದ್ದನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ