ನವದೆಹಲಿ: ಪುಲ್ವಾಮ ಉಗ್ರ ದಾಳಿ ಬಳಿಕ ಭಾರತ ನಡೆಸಿದ ವಾಯುದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಹವಣಿಸುತ್ತಿರುವ ಉಗ್ರ ಸಂಘಟನೆಗಳು ಭಾರತದ ವಾಯುನೆಲೆಗಳನ್ನೇ ಗುರಿಯಾಗಿಸಿಕೊಂಡು ಭಾರಿ ವಿಧ್ವಂಸಕ ಉಗ್ರ ದಾಳಿ ನಡೆಸಲು ಸಂಚು ರೂಪಿಸಿವೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.
ಮೂಲಗಳ ಪ್ರಕಾರ ಉಗ್ರರು ಜಮ್ಮು ಮತ್ತು ಕಾಶ್ಮೀರದ ಆವಂತಿಪೋರ ಮತ್ತು ರಾಜಧಾನಿ ಶ್ರೀನಗರ ವಾಯುನೆಲೆಗಳ ಮೇಲೆ ಭಾರೀ ದಾಳಿಗೆ ಸಿದ್ಧತೆ ನಡೆಸಿದ್ದು, ಶೀಘ್ರವೇ ದಾಳಿಗೆ ಸಂಚು ರೂಪಿಸಿದ್ದಾರೆ ಎಂದು ತಿಳಿದುಬಂದಿದೆ.
ಕಣಿವೆ ರಾಜ್ಯ ಸೇರಿದಂತೆ ದೇಶದ ವಾಯುನೆಲೆಗಳಲ್ಲಿ ಹೈ ಅಲರ್ಟ್ ಘೋಷಣೆ
ಇನ್ನು ಗುಪ್ತಚರ ಇಲಾಖೆ ಎಚ್ಚರಿಕೆ ಬೆನ್ನಲ್ಲೇ ದೇಶದ ವಾಯುನೆಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಪ್ರಮುಖವಾಗಿ ಆವಂತಿಪೋರ ಮತ್ತು ಶ್ರೀನಗರ ವಾಯುನೆಲೆಗಳ ಸುತ್ತಮುತ್ತ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ. ವಾಯುನೆಲೆಗಳ ಸುತ್ತ ಹೈ ಅಲರ್ಟ್ ಘೋಷಿಸಲಾಗಿದ್ದು, ಬಿಗಿ ಭದ್ರತೆ ನಿಯೋಜಿಸಲಾಗಿದೆ.
ನಿನ್ನೆಯಷ್ಟೇ ಶೋಪಿಯಾನ್ ಮತ್ತು ಪುಲ್ವಾಮಾದಲ್ಲಿ ನಡೆದ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ 6 ಮಂದಿ ಜೈಷ್ ಇ ಮೊಹಮದ್ ಉಗ್ರರನ್ನು ಹತ್ಯೆಗೈಯ್ಯಲಾಗಿತ್ತು. ಅಂತೆಯೇ ಘಟನೆಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದರು.