ಬೆಂಗಳೂರು,ಮೇ 17- ರೆಟಿನೊಬ್ಲಾಸ್ಟೊಮಾ ಎಂಬುದು ಚಿಕ್ಕ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಒಳಾವರಣದ ಕ್ಯಾನ್ಸರ್ ಗಂಥಿಯಾಗಿದ್ದು, ಭಾರತದಲ್ಲಿ ಒಂದು ದಶಲಕ್ಷ ಮಕ್ಕಳಿಗೆ ನಾಲ್ಕು ಮಕ್ಕಳಲ್ಲಿ ಇದು ಕಂಡು ಬರುತ್ತದೆ.
ಇಂತಹ ಪ್ರಕರಣಗಳ ಪೈಕಿ ಶೇ.90ರಷ್ಟು ಐದು ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕಂಡುಬರುತ್ತವೆ. ಭಾರತದಲ್ಲಿ ಪ್ರತಿ ವರ್ಷ 2500 ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಇದು ಒಂದು ಕಣ್ಣಿಗೆ (ಏಕಪಕ್ಷೀಯ -ಶೇ.70) ಬರಬಹುದು ಅಥವಾ ಎರಡೂ ಕಣ್ಣುಗಳಿಗೆ ( ದ್ವಿಪಕ್ಷೀಯ -ಶೇ.30)ಬರಬಹುದು.
ಕಣ್ಣಿಗೆ ಮಾತ್ರವೇ ಇದು ಸೀಮಿತವಾಗಿದ್ದರೆ ಮಕ್ಕಳು ಬದುಕುಳಿಯವ ಸಾಧ್ಯೆ ಹೆಚ್ಚಿದೆ. ಆದರೆ, ಬೇರೆ ಕಡೆಗಳಿಗೆ ಇದು ಹಬ್ಬಿದರೆ ತೀವ್ರತರವಾದ ಚಿಕಿತ್ಸೆ ಅಗತ್ಯವಿದ್ದು, ಅದನ್ನು ನೀಡಿದರೂ ಬಹುತೇಕ ಮಕ್ಕಳು ಸಾವಿಗೀಡಾಗುತ್ತಾರೆ.
ರೆಟಿನೊಬ್ಲಾಸ್ಟೊಮಾ ಕಾಯಿಲೆಯ ಸಾಮಾನ್ಯವಾದ ಆರಂಭಿಕ ರೋಗಲಕ್ಷಣವೆಂದರೆ, ಹೆಚ್ಚಾಗಿ ಫ್ಲಾಶ್ ಪೋಟೋಗಳಲ್ಲಿ ಕಂಡುಬರುವಂತೆ, ಕಣ್ಣಿನಲ್ಲಿ ಹೊಳೆಯುವ ಬಿಳುಪು ಕಂಡುಬರುವುದು. ಕ್ಯಾನ್ಸರ್ ಉಲ್ಬಣಗೊಂಡಾಗ, ಬಿಳಿಯ ಪ್ರತಿಫಲನ ಬರಿಗಣ್ಣಿಗೆ ಕಾಣಿಸುತ್ತದೆ. ಸಾಮಾನ್ಯವಾಗಿ ಕಡಿಮೆ ಬೆಳಕಿರುವ ಸಮಯದಲ್ಲಿ ಅಂದರೆ ಬೆಳಗ್ಗೆ ಮತ್ತು ಮುಸ್ಸಂಜೆಯಲ್ಲಿ ಹೀಗೆ ಕಂಡು ಬರುತ್ತದೆ.
ಕಂಡುಬರುವ ಇತರೆ ರೋಗಲಕ್ಷಣಗಳೆಂದರೆ ಮೆಳ್ಳಗಣ್ಣು ( ಒಂದು ಕಣ್ಣು ಪಕ್ಕಕ್ಕೆ ಸರಿದಿರುವಂತೆ ಇರುವುದು, ವಿಶೇಷವಾಗಿ ಆರಂಭದಲ್ಲಿಯೇ ಹೊರಳಿಕೊಂಡಿರುವುದು). ಮಂದ ದೃಷ್ಟಿ. ಉರಿಯೂತ (ಕೆಂಪಾದ ಕಣ್ಣು ) ಊದಿಕೊಂಡಿರುವ ಕಣ್ಣು ಮತ್ತು (ನೀಲಿ ಕಣ್ಣು ).
ದೇಶದಾದ್ಯಂತ ಶೇ.50ಕ್ಕೂ ಹೆಚ್ಚಿನ ಇಂತಹ ರೋಗಗ್ರಸ್ಥ ಮಕ್ಕಳು ರೋಗವು ಉಲ್ಬಣಾವಸ್ಥೆಯಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುತ್ತಾರೆ. ಕರ್ನಾಟಕದಲ್ಲಿನ ಪರಿಸ್ಥಿತಿ ಇದಕ್ಕಿಂತ ಭಿನ್ನವೇನಿಲ್ಲ.
ಆ ರೋಗದ ಮುನ್ಸೂಚನೆಗಳ ಕುರಿತು ಜನಸಾಮಾನ್ಯರಿಗೆ ಇರುವ ಅರಿವನ ಕೊರತೆ. ರೋಗ ಪತ್ತೆಯಲ್ಲಿ ಮತ್ತು ಚಿಕಿತ್ಸೆ ನೀಡುವಲ್ಲಿನ ವಿಳಂಬ. ಇವುಗಳ ಕಾರಣ ರೋಗ ಉಲ್ಬಣಾವಸ್ಥೆ ತಲುಪುತ್ತದೆ. ಇದು ಚಿಕಿತ್ಸೆಯಲ್ಲಿ ಋಣಾತ್ಮಕ ಪರಿಣಾಮ ಬೀರುತ್ತದೆ.
ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಈ ರೋಗದ ಮರಣ ಪ್ರಮಾಣ ನಮ್ಮ ದೇಶದಲ್ಲಿ ಹೆಚ್ಚಾಗಿದೆ. ಕಾರಣವೇನೆಂದರೆ ನಮ್ಮ ದೇಶದಲ್ಲಿ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳು ಲಭ್ಯವಿದ್ದರೂ ಉಲ್ಬಣಾವಸ್ಥೆಯಲ್ಲಿನ ರೋಗಿಗಳ ಚಿಕಿತ್ಸೆಯು ಬಹುತೇಕ ಸಂದರ್ಭಗಳಲ್ಲಿ ವಿಫಲವಾಗುವುದೇ ಹೆಚ್ಚು. ಅಭಿವೃದ್ಧಿ ಹೊಂದಿ ದೇಶಗಳಲ್ಲಿ ಮಕ್ಕಳ ಬಾಲ್ಯದಲ್ಲಿಯೇ ಆರಂಭಿಕ ತಪಾಸಣೆ ನಡೆಸಿ ಈ ಕಾಯಿಲೆಯನ್ನು ಶೀಘ್ರವಾಗಿ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಮುಂದಾದರೆ ಫಲಿತಾಂಶ ಉತ್ತಮವಾಗಿರುತ್ತದೆ.
ಈ ನಿಟ್ಟಿನಲ್ಲಿ ರೆಟಿನೊಬ್ಲಾಸ್ಟೊಮಾ ಜಾಗೃತಿಗಾಗಿ ನಾಳೆ ಕಿದ್ವಾಯಿ ಆಸ್ಪತ್ರೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.