ಮಾನಸಿಕವಾಗಿ ನಾವು ಬ್ರಿಟೀಷ್ ಪ್ರಜೆಗಳು-ಚಂದ್ರಶೇಖರ ಕಂಬಾರ

ಬೆಂಗಳೂರು, ಮೇ 17- ಸದ್ಯದ ಪರಿಸ್ಥಿತಿಯಲ್ಲಿ ಮಾನಸಿಕವಾಗಿ ನಾವು ಬ್ರಿಟಿಷ್ ಪ್ರಜೆಗಳಾಗಿದ್ದೇವೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಕನ್ನಡ ಭವನದ ನಯನ ಸಭಾಂಗಣದಲ್ಲಿಂದು ಸಾಹಿತ್ಯ ಅಕಾಡೆಮಿ ಹಾಗೂ ಪಂಪ ಸಾಂಸ್ಕøತಿಕ ಮತ್ತು ಸಾಮಾಜಿಕ ಕೇಂದ್ರ ಬೆಂಗಳೂರು ವತಿಯಿಂದ ಏರ್ಪಡಿಸಿದ್ದ ಬಿ.ಪುಟ್ಟಸ್ವಾಮಯ್ಯ ಅವರ ಬದುಕು-ಬರಹ ಕುರಿತ ಒಂದು ದಿನದ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ಮೆಕಾಲೆ ಅವರು ಶೈಕ್ಷಣಿಕ ಕ್ರಾಂತಿ ಹುಟ್ಟುಹಾಕಿದ್ದಲ್ಲದೆ, ದಲಿತರು ಸೇರಿದಂತೆ ಎಲ್ಲ ವರ್ಗಕ್ಕೂ ಸಮಾನ ಮತ್ತು ಗುಣಮಟ್ಟದ ಶಿಕ್ಷಣ ನೀಡಿದರು. ಆದರೆ, ಇಂದಿನ ಪರಿಸ್ಥಿತಿಯಲ್ಲಿ ನಮ್ಮಲ್ಲಿನ ಆಸ್ಮಿತೆ ಮರೆತಿದ್ದು, ಇಂಗ್ಲಿಷ್‍ನಲ್ಲೇ ಮುಳುಗಿಹೋಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಬಿ.ಪುಟ್ಟಸ್ವಾಮಯ್ಯ ಅವರನ್ನು ನಾವು ಮರೆಯುತ್ತಿದ್ದೇವೆ. ಒಂದು ಕಡೆಯಲ್ಲಿ ಅವರಿಗೆ ಸೂಕ್ತ ಪ್ರಸಿದ್ಧಿ ದೊರೆಯಲಿಲ್ಲ ಆದರೆ, ಅವರಿಗೆ ರಂಗಭೂಮಿ ಕುರಿತು ಅಪಾರ ಆಸಕ್ತಿ ಇತ್ತು ಎಂದರು.

ಸ್ವಾತಂತ್ರ್ಯಕ್ಕೂ ಮೊದಲು ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ನಾಟಕ ಪ್ರಮುಖ ಸಂವಹನ ಪಾತ್ರ ವಹಿಸಿತ್ತು. ಇನ್ನು ನಾಟಕದಲ್ಲಿನ ರಾವಣ ಧಾಟಿಯನ್ನು ಬ್ರಿಟಿಷರು ಎಂದು ಪುಟ್ಟಸ್ವಾಮಯ್ಯ ಅವರು ಬಿಂಬಿಸುತ್ತಿದ್ದರು ಎಂದು ಕಂಬಾರ ಸ್ಮರಿಸಿದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆಯೊಳಗೆ, ಸಂಗೀತ-ನಾಟಕ ಅಕಾಡೆಮಿಗಳಿವೆ. ಇದರ ವ್ಯಾಪ್ತಿ, ಕಾರ್ಯ ವೈಖರಿ ಹೆಚ್ಚಾಗಬೇಕು.ಅದೇ ರೀತಿ ಹಿರಿಯ ನಾಟಕಕಾರರಾದ ಮಾಸ್ಟರ್ ಹಿರಣ್ಣಯ್ಯ, ಗುಬ್ಬಿ ವೀರಣ್ಣ ಸೇರಿದಂತೆ ಪ್ರಮುಖರ ಪರಂಪರೆಯನ್ನು ಬೆಳೆಸಿ ಅವರ ನಾಟಕಗಳ ಬಗ್ಗೆ ಚರ್ಚಿಸಬೇಕು ಎಂದು ಹೇಳಿದರು.

ಪುಟ್ಟಸ್ವಾಮಯ್ಯ ಅವರು ಇಂಗ್ಲಿಷ್ ಗೀತೆಗಳನ್ನು ಭಾಷಾಂತರ ಮಾಡಿದ್ದಾರೆ. 18 ನಾಟಕ, 17 ಕಾದಂಬರಿ, ಎರಡು ಮಕ್ಕಳ ಪುಸ್ತಕಗಳನ್ನು ರಚಿಸಿದ್ದಾರೆ. ಕುವೆಂಪು ಅವರಂತೆ ನಮ್ಮ ಸುತ್ತಮುತ್ತಲಿನ ಸಮಸ್ಯೆಗಳನ್ನು ಅರಿತು ತಮ್ಮ ಲೇಖನದಲ್ಲಿ ಬರೆಯುತ್ತಿದ್ದರು ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದ ಕವಿಗೋಷ್ಠಿ ಹಮ್ಮಿಕೊಳ್ಳಬೇಕು. ಇಂತಹ ದೊಡ್ಡ ದೊಡ್ಡ ಮಟ್ಟದ ಕಾರ್ಯಕ್ರಮಗಳನ್ನು ನಡೆಸಿದರೆ ನಮ್ಮ ಅಕಾಡೆಮಿಯಿಂದ ನೆರವು ನೀಡಲಾಗುವುದು ಎಂದು ಚಂದ್ರಶೇಖರ ಕಂಬಾರ ಭರವಸೆ ನೀಡಿದರು.

ರಂಗಭೂಮಿ ಕಲಾವಿದ ಹಾಗೂ ನಿರ್ದೇಶಕ ಟಿ.ಎಸ್. ನಾಗಾಭರಣ ಅವರು ಮಾತನಾಡಿ, ಪಂಪ, ಕುವೆಂಪು ಮತ್ತಿತರ ಹಿರಿಯರ ಜತೆ ತಮ್ಮನ್ನು ತಾವು ಗುರುತಿಸಿಕೊಂಡವರು ಪುಟ್ಟಸ್ವಾಮಯ್ಯ ಅವರು. ಕನ್ನಡ ಆಸ್ಮಿತೆಯನ್ನು ತಮ್ಮದಾಗಿಸಿಕೊಂಡು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಮುಂದಿನ ಹತ್ತು ದಿನಕ್ಕೆ ಪುಟ್ಟಸ್ವಾಮಯ್ಯ ಅವರಿಗೆ 122 ವರ್ಷ ತುಂಬಲಿದೆ. ಈ ಸಂದರ್ಭದಲ್ಲಿ ನಾವು ಅವರನ್ನು ಮರು ನಾಮಕರಣ ಮಾಡುವ ಜತೆಗೆ ಅವರ ಬಗ್ಗೆ ಮರು ಚಿಂತನೆ ಹುಟ್ಟು ಹಾಕಬೇಕು ಎಂದರು.

ಪುಟ್ಟಸ್ವಾಮಯ್ಯ ಅವರನ್ನು ನೆನಪಿಸಿಕೊಳ್ಳುವುದು ನಮ್ಮನ್ನು ನಾವು ವಿಮರ್ಶೆ ಮಾಡಿಕೊಂಡ ಹಾಗೆ. ಕೇವಲ 9ನೆ ತರಗತಿ ವ್ಯಾಸಂಗ ಮಾಡಿ ಇಷ್ಟೆಲ್ಲ ಸಾಹಿತ್ಯ ರಚಿಸಿದ್ದಾರೆ ಎಂದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕಿ ಕೆ.ಎಂ.ಜಾನಕಿ ಮಾತನಾಡಿ, ನಾಟಕ, ರಂಗಭೂಮಿ ಕ್ಷೇತ್ರದಲ್ಲಿ ಪುಟ್ಟಸ್ವಾಮಯ್ಯ ಅವರು ಚಿರಪರಿಚಿತರು. ಅವರ, ಪರಂಪರೆ ಉಳಿಸಿಕೊಳ್ಳಲು ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುವುದೆಂದು ತಿಳಿಸಿದರು.

ರಾಷ್ಟ್ರೀಯ ವಿಚಾರ ಸಂಕಿರಣ: ಕನ್ನಡ ನಾಡಿನ ಬಹುಮುಖ ಪ್ರತಿಭೆ, ನಾಟಕಕಾರ ಬಿ.ಪುಟ್ಟಸ್ವಾಮಯ್ಯ ಅವರ ಸಾಧನೆ, ರಂಗಭೂಮಿಗೆ ನೀಡಿರುವ ಸೇವೆ ಕುರಿತು ರಾಷ್ಟ್ರಮಟ್ಟದಲ್ಲಿ ಚರ್ಚೆ ನಡೆಯಬೇಕು. ಈ ನಿಟ್ಟಿನಲ್ಲಿ, ಕೇಂದ್ರ ಸಾಹಿತ್ಯ ಅಕಾಡೆಮಿ ಸಹಯೋಗದೊಂದಿಗೆ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ಏರ್ಪಡಿಸಿ ಎಂದು ವೇದಿಕೆಯಲ್ಲಿ ಹಾಜರಿದ್ದ ಪಂಪ ಸಾಂಸ್ಕøತಿಕ ಮತ್ತು ಸಾಮಾಜಿಕ ಕೇಂದ್ರ ಕಾರ್ಯದರ್ಶಿ ಆರ್.ವೆಂಕಟರಾಜು ಅವರಿಗೆ ಚಂದ್ರಶೇಖರ ಕಂಬಾರರು ಹೇಳಿದರು.

ವಿಚಾರ ಸಂಕಿರಣದಲ್ಲಿ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿ ಸದಸ್ಯ ಎಲ್.ಎನ್.ಮುಕುಂದರಾಜ್, ಪಂಪ ಸಾಂಸ್ಕøತಿಕ ಮತ್ತು ಸಾಮಾಜಿಕ ಕೇಂದ್ರ ಕಾರ್ಯದರ್ಶಿ ಆರ್.ವೆಂಕಟರಾಜು, ಸಾಹಿತ್ಯ ಅಕಾಡೆಮಿ ಪ್ರಾದೇಶಿಕ ಕಾರ್ಯದರ್ಶಿ ಎಸ್.ಪಿ.ಮಹಲಿಂಗೇಶ್ವರ, ನಾಗೇಂದ್ರ ಪ್ರಸಾದ್, ಉಗಮ ಶ್ರೀನಿವಾಸ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ