ಬೆಂಗಳೂರು, ಮೇ 17- ವಿಲ್ಸನ್ಗಾರ್ಡನ್ ಸಂಚಾರ ವ್ಯಾಪ್ತಿಯ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಮೇ 19ರಂದು ಮ್ಯಾರಥಾನ್ ರ್ಯಾಲಿ ಹಮ್ಮಿಕೊಂಡಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಸಲುವಾಗಿ ಸಂಚಾರದಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ.
ಈ ಮ್ಯಾರಥಾನ್ ರ್ಯಾಲಿಯಲ್ಲಿ ಪುರುಷರು, ಮಹಿಳೆಯರು, ಹಿರಿಯ ನಾಗರಿಕರು ಹಾಗೂ ವಿಕಲಚೇತನರು ಪಾಲ್ಗೊಳ್ಳಲಿದ್ದು, ಸಾರ್ವಜನಿಕ ವಾಹನಗಳ ಓಡಾಟಕ್ಕೆ ಅಡಚಣೆಯಾಗದಂತೆ ಮಾರ್ಗ ಬದಲಾವಣೆ ಮಾಡಲಾಗಿದೆ.
ಮ್ಯಾರಥಾನ್ನಲ್ಲಿ ಪಾಲ್ಗೊಳ್ಳುವವರು ಆರ್ಆರ್ಎಂಆರ್ ರಸ್ತೆ, ಕೆಜಿ ರಸ್ತೆ, ಪೊಲೀಸ್ ಕಾರ್ನರ್ ಬಳಿ, ಸೆಂಟ್ಮಾಕ್ರ್ಸ್ ರಸ್ತೆ, ಎಸ್ಬಿಐ ವೃತ್ತದ ಬಳಿ ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ.
ನಿಷೇಧ: ಕಸ್ತೂರ ಬಾ ರಸ್ತೆ, ಎಂಜಿ ರಸ್ತೆ, ಕ್ವೀನ್ಸ್ ವೃತ್ತ, ಕಬ್ಬನ್ ರಸ್ತೆ, ಕಾಮರಾಜ ರಸ್ತೆ, ಸೆಂಟ್ರಲ್ ಸ್ಟ್ರೀಟ್, ವಿಠಲ್ಮಲ್ಯ ರಸ್ತೆ, ಕಬ್ಬನ್ ಉದ್ಯಾನವನದ ಒಳಭಾಗದ ರಸ್ತೆಗಳು ಸೇರಿದಂತೆ ಸುತ್ತಮುತ್ತಲ ಜಂಕ್ಷನ್ನಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ಮ್ಯಾರಥಾನ್ ನಡೆಯುವ ಸಮಯದಲ್ಲಿ ಜೆಸಿ ರಸ್ತೆಯಿಂದ ವಿಧಾನಸೌಧ, ಶಿವಾಜಿನಗರ ಮತ್ತು ರಾಜಭವನ ರಸ್ತೆ ಕಡೆಗೆ ಹೋಗುವ ಸಾರ್ವಜನಿಕ ವಾಹನಗಳು ಕೆಆರ್ ವೃತ್ತದ ಮಾರ್ಗವಾಗಿ ಅಂಬೇಡ್ಕರ್ ರಸ್ತೆ ಮೂಲಕ ಸಾಗಬಹುದಾಗಿದೆ.
ಹೊಸೂರು ರಸ್ತೆ, ಆಡುಗೋಡಿ ಕಡೆಯಿಂದ ಬಂದು ಮೆಜಸ್ಟಿಕ್ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಡೆ ಹೋಗುವ ವಾಹನಗಳು ಅಶೋಕನಗರ ಸಿಗ್ನಲ್ ಲೈಟ್ ಬಳಿ ಎಡತಿರುವು ಪಡೆದು ರಿಚ್ಮಂಡ್ ರಸ್ತೆ, ಹಡ್ಸನ್ ವೃತ್ತ, ಕೆಜಿ ರಸ್ತೆ ಮೂಲಕ ಸಂಚರಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.