ಬೆಂಗಳೂರು, ಮೇ 17- ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾದರಾಯನಪುರದ ಹಿಂದೂ ರುದ್ರಭೂಮಿ ತೆರವುಗೊಳಿಸಿರುವುದನ್ನು ವಿರೋಧಿಸಿ ಹಿಂದೂಪರ ಸಂಘಟನೆಗಳು ರಿಷಿಕುಮಾರ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ರಿಷಿಕುಮಾರ ಸ್ವಾಮೀಜಿ ಹಿಂದೂ ರುದ್ರಭೂಮಿಯನ್ನು ಡೆಮಾಲಿಷನ್ ಮಾಡಿರುವುದು ಸರಿಯಲ್ಲ. ಸಚಿವ ಜಮೀರ್ ಅಹಮ್ಮದ್ಖಾನ್ ಅವರ ಕುಮ್ಮಕ್ಕಿನಿಂದ ಇದನ್ನು ತೆರವುಗೊಳಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಹಿಂದೂಗಳ ಸಮಾಧಿಯನ್ನು ಕಿತ್ತುಹಾಕಿ ಅವರ ಮೇಲೆ ದಬ್ಬಾಳಿಕೆ ಮಾಡಲಾಗುತ್ತಿದೆ. ಮೈತ್ರಿ ಸರ್ಕಾರ ಇದನ್ನು ನಿಲ್ಲಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಕೇವಲ ಬಾಯಿಮಾತಿನಲ್ಲಿ ಸಹೋದರತ್ವ ಹೇಳಿದರೆ ಸಾಲದು. ಕೃತಿಯಲ್ಲಿ ತೋರಿಸಬೇಕು. ಜೆಸಿಬಿ ಮೂಲಕ ಜನರ ಭಾವನೆಯನ್ನು ಒಡೆಯುವ ಕೆಲಸ ಮಾಡಬಾರದು. ಈ ಬಗ್ಗೆ ಸಂಬಂಧಪಟ್ಟವರಿಗೆ ದೂರು ಕೊಡುತ್ತೇವೆ ಎಂದು ಹೇಳಿದರು. ಪ್ರತಿಭಟನೆಗೆ ಶ್ರೀರಾಮಸೇನೆ ಕಾರ್ಯಕರ್ತರು ಸಾಥ್ ನೀಡಿದರು.
ಸ್ಥಳೀಯ ಬಿಬಿಎಂಪಿ ಸದಸ್ಯ ಸೀಮಾ ಅಲ್ತಾಫ್ಖಾನ್ ಕಡೆಯವರಿಗೆ ರುದ್ರಭೂಮಿಯ ಕಸ ತೆಗೆಯಲು ಟೆಂಡರ್ ನೀಡಲಾಗಿದ್ದು, ರುದ್ರಭೂಮಿ ಶುಚಿತ್ವ ಮಾಡುವ ನೆಪದಲ್ಲಿ ಗೋರಿಗಳ ನೆಲಸಮ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.