ಬೆಂಗಳೂರು. ಮೇ17- ಮೇ 23ರ ಲೋಕಾಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕ ಮಹತ್ವದ ರಾಜಕೀಯ ಬದಲಾವಣೆ ಆಗುವ ನಿರೀಕ್ಷೆಯಲ್ಲಿರುವ ರಾಜ್ಯ ಬಿಜೆಪಿ ನಾಯಕರು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಪತನಗೊಳಿಸಲು ಈ ಬಾರಿ ಯೋಜಿತ ಕಾರ್ಯತಂತ್ರ ರೂಪಿಸುವತ್ತ ಮಗ್ನರಾಗಿದ್ದಾರೆ.
ಇದಕ್ಕೆ ಇಂಬು ನೀಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮೇ21ಕ್ಕೆ ತಮ್ಮ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಫಲಿತಾಂಶ ಪೂರ್ವ ನಡೆಯಲಿರುವ ಈ ಸಭೆ ಮೇಲೆ ಭಾರೀ ಕುತೂಹಲ ಉಂಟಾಗಿದೆ.
ಸಭೆಯಲ್ಲಿ ಹಲವು ವಿಚಾರಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದ್ದು, ಚುನಾವನಾ ಫಲಿತಾಂಶ ಪ್ರಕಟಗೊಂಡ ಬಳಿಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗಲಿದೆ. ಆದ್ದರಿಂದ, ಮೇ 21ರಂದು ನಡೆಯಲಿರುವ ಸಭೆಯಲ್ಲಿ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಸಭೆ ಕರೆಯಲಾಗಿದೆ ಎಂದು ತಿಳಿದುಬಂದಿದೆ.
ಚುನಾವಣಾ ಫಲಿತಾಂಶ ಪ್ರಕಟಣೆ ಬಳಿಕ ಮೈತ್ರಿ ಸರ್ಕಾರದ ಮೇಲಾಗುವ ಪರಿಣಾಮಗಳೇನು? ಫಲಿತಾಂಶದ ಆಧಾರದ ಮೇಲೆ ಮುಂದಿನ ಕಾರ್ಯತಂತ್ರಗಳ ಲೆಕ್ಕಾಚಾರ ಇತ್ಯಾದಿ ವಿಷಯಗಳ ಬಗ್ಗೆ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಚರ್ಚೆ ನಡೆಸಲಾಗುವುದು.
ಅಲ್ಲದೇ ಫಲಿತಾಂಶದ ಬಳಿಕ ರಾಜ್ಯದಲ್ಲಿ ಏನುಬೇಕಾದರೂ ಬೆಳವಣಿಗೆಗಳು ಆಗಬಹುದು ಹೀಗಾಗಿ ಎಲ್ಲಾ ಶಾಸಕರು ಒಗ್ಗಟ್ಟಿನಿಂದಿರಬೇಕು ಮತ್ತು ಅಲರ್ಟ್ ಆಗಿರಿ ಎಂದು ಯಡಿಯೂರಪ್ಪ ಶಾಸಕರಿಗೆ ಸೂಚನೆ ನೀಡಲಿದ್ದಾರೆ.
ಲೋಕಸಭಾ ಚುನಾವಣೆ ಫಲಿತಾಂಶ ಬಳಿಕ ರಾಜ್ಯದ ಮೈತ್ರಿ ಸರ್ಕಾರದಲ್ಲಿ ಭಿನ್ನಮತ ಉಂಟಾಗುವ ಸಾಧ್ಯತೆ ಇದ್ದು, ಆಗ ಬಿಜೆಪಿ ನಡೆ ಏನಾಗಿರಬೇಕು? ಎಂದು ಶಾಸಕರ ಜೊತೆ ಯಡಿಯೂರಪ್ಪ ಅವರು ಚರ್ಚೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.
ಮೇ 23ರಂದು ಲೋಕಸಭಾ ಚುನಾವಣೆ ಫಲಿತಾಂಶ ಮಾತ್ರವಲ್ಲದೆ ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಫಲಿತಾಂಶವೂ ಪ್ರಕಟವಾಗಲಿದೆ. ಆದ್ದರಿಂದ, ಫಲಿತಾಂಶದ ಬಳಿಕ ಮುಂದೇನು? ಎಂದು ಚರ್ಚಿಸಲು ಯಡಿಯೂರಪ್ಪ ಅವರು ಸಭೆ ಕರೆದಿದ್ದಾರೆ.
ಕಾಂಗ್ರೆಸ್ ನಾಯಕರ ವಿರುದ್ಧ ಮುನಿಸಿಕೊಂಡಿರುವ ಮಾಜಿ ಸಚಿವ, ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಇತರ ಶಾಸಕರು ಮೇ 23ರ ಬಳಿಕ ತಮ್ಮ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆ ಇದೆ. ಆದ್ದರಿಂದ, ಶಾಸಕರ ಅಭಿಪ್ರಾಯವನ್ನು ಯಡಿಯೂರಪ್ಪ ಸಂಗ್ರಹಿಸಲಿದ್ದಾರೆ.
ಲೋಕಸಭಾ ಚುನಾವಣಾ ಫಲಿತಾಂಶ ಮೈತ್ರಿ ಸರ್ಕಾರದಲ್ಲಿ ವೈಮನಸ್ಸು ತರಲಿದೆ ಎಂಬ ವಿಶ್ವಾಸದಲ್ಲಿ ಬಿಜೆಪಿ ನಾಯಕರಿದ್ದಾರೆ. ಆದ್ದರಿಂದ, ಕಗ್ಗಂಟು ಉಂಟಾದರೆ ಪಕ್ಷದ ಮುಂದಿನ ನಡೆ ಏನಾಗಿರಬೇಕು? ಎಂದು ಯಡಿಯೂರಪ್ಪ ಅವರು ಶಾಸಕರಿಂದ ಅಭಿಪ್ರಾಯವನ್ನು ಸಂಗ್ರಹಿಸಲಿದ್ದಾರೆ.
ಮೈತ್ರಿ ಸರ್ಕಾರ ಆರಂಭವಾದ ದಿನದಿಂದಲ್ಲೂ ಅತೀ ಹೆಚ್ಚು ಸ್ಥಾನ ಗೆದಿದ್ದರೂ ಸರ್ಕಾರ ರಚನೆ ಮಾಡಲು ಹರಸಾಹಸಪಡುತ್ತಿರುವ ಬಿಜೆಪಿ ಆಪರೇಷನ್ ಕಮಲವನ್ನು ಇನ್ನೂ ಸಹ ನಿಲ್ಲಿಸದೇ ಗಾಳ ಹಾಕಿದ್ದ ಶಾಸಕರೊಟ್ಟಿಗೆ ನಿರಂತರ ಸಂಪರ್ಕವಿಟ್ಟುಕೊಂಡಿದೆ.
ಕಾಂಗ್ರೆಸ್ ರೆಬೆಲ್ ಶಾಸಕ ರಮೇಶ್ ಜಾರಕಿಹೊಳಿ ಅವರನ್ನು ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ಭೇಟಿ ಮಾಡಿ ಮಾತುಕತೆ ನಡೆಸಿದ್ದು ಮೇ 23ರ ಬಳಿಕ ಅಸಲಿ ಆಟ ಶುರು ಮಾಡಲು ಬಿಜೆಪಿ ಸಕಲ ಸಿದ್ದತೆ ಮಾಡಿಕೊಳ್ಳುತ್ತಿದೆ.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ರಮೇಶ್ ಜಾರಕಿಹೊಳಿಗೆ ಸಂದೇಶವೊಂದನ್ನು ರವಾನಿಸಿದ್ದು ಮೇ 23ರ ತನಕ ಯಾವುದೇ ಕಾರಣಕ್ಕೂ ಮಾಧ್ಯಮದ ಮುಂದೆ ರಾಜೀನಾಮೆ ಬಗ್ಗೆ ಪ್ರಸ್ತಾಪ ಮಾಡಬೇಡಿ ಎಂದು ಸಿ.ಪಿ ಯೋಗೇಶ್ವರ್ ಮೂಲಕ ಸೂಚನೆ ಕೊಡಿಸಿದ್ದಾರೆ.
ಮೇ23ರ ನಂತರ ಎಲ್ಲದಕ್ಕೂ ಸಿದ್ಧರಾಗಿರಬೇಕು. ಅಲ್ಲಿಯವರೆಗೂ ನಿಮ್ಮ ಬೆಂಬಲಿಗರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಿ, ರಾಜ್ಯ ರಾಜಕೀಯ ದಿಕ್ಕು ಬದಲಾಗಲಿದೆ ಎಂದು ಸಂದೇಶ ರವಾಸಿದ್ದು ಸಿ.ಪಿ ಯೋಗೇಶ್ವರ್ ಆಪರೇಷನ್ ಕಮಲದ ಸಾರಥ್ಯ ಮುಂದುವರೆಸಿದ್ದಾರೆ.
ಈ ಹಿಂದೆ ಆಪರೇಷನ್ ಕಮಲ ಆರಂಭಿಸಿದ ಬಿಜೆಪಿ ಕಾಂಗ್ರೆಸ್‍ನಲ್ಲಿ ಅತೃಪ್ತರನ್ನು ತಮ್ಮ ಕಡೆ ಸೆಳೆದು ಮುಂಬೈನ ರೆಸಾರ್ಟ್‍ವೊಂದರಲ್ಲಿ ಇರಿಸಲಾಗಿತ್ತು. ಸಾಕಷ್ಟು ಅಡೆತಡೆಗಳು ಎದುರಾಗಿ ಆಪರೇಷನ್ ಕಮಲ ಯಶಸ್ವಿಯಾಗಲಿಲ್ಲ. ಆದರೆ ಬಿಜೆಪಿ ಇಷ್ಟಕ್ಕೆ ಸುಮ್ಮನಾಗದೇ ಗಾಳಕ್ಕೆ ಬಿದ್ದವರನ್ನು ಈಗಲೂ ಸಹ ಸಂಪರ್ಕ ಇಟ್ಟುಕೊಳ್ಳುವ ಮೂಲಕ ಆಪರೇಷನ್ ಕಮಲವನ್ನು ಜೀವಂತವಾಗಿಸಿಕೊಂಡಿದೆ.