ಬೆಂಗಳೂರು; ಇತ್ತೀಚೆಗೆ ಭೂಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಗಾಂಧಿಯನ್ನು ಹತ್ಯೆ ಮಾಡಿದ್ದ ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದಿದ್ದು ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಅದರ ಬೆನ್ನಿಗೆ ಟ್ವೀಟ್ ಮಾಡಿದ್ದ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಸಹ ಪೇಚಿಗೆ ಸಿಲುಕಿ ನಂತರ ಟ್ವಿಟರ್ನಲ್ಲಿ ತನ್ನ ಸ್ಟೇಟಸ್ ಅನ್ನು ಡಿಲೀಟ್ ಮಾಡಿದ್ದರು. ಈಗ ವಿವಾದಕ್ಕೆ ಹೆಸರಾದ ಅನಂತಕುಮಾರ್ ಹೆಗಡೆ ಸಹ ಈ ಕುರಿತು ಟ್ವೀಟ್ ಮಾಡಿದ್ದು ಹೊಸದೊಂದು ವಿವಾದಕ್ಕೆ ಎಡೆಮಾಡಿಕೊಟ್ಟಿದ್ದಾರೆ.
ಉತ್ತರ ಕನ್ನಡ ಸಂಸದ ಅನಂತ್ಕುಮಾರ್ ಹೆಗಡೆ ಖಾಸಗಿ ಟ್ವೀಟರ್ ಅಕೌಂಟ್ನಲ್ಲಿ ಈ ಕುರಿತು ಟ್ವೀಟ್ ಮಾಡಿದ್ದು, “ಕಳೆದ 7 ದಶಕದಲ್ಲಿ ನಾಥೂರಾಮ್ ಗೋಡ್ಸೆ ಬಗ್ಗೆ ಈ ತಲೆಮಾರು ಮೊದಲ ಬಾರಿಗೆ ಬದಲಾದ ಹೊಸ ಗ್ರಹಿಕೆಯ ಪರಿಸರದಲ್ಲಿ ಚರ್ಚೆ ಮಾಡುತ್ತಿದೆ. ಕೊನೆಗೂ ಗೋಡ್ಸೆ ಬಗೆಗಿನ ಇಂತಹ ಚರ್ಚೆಗಳು ಸಂತಸ ನೀಡುತ್ತಿವೆ” ಎಂದು ಬರೆದುಕೊಂಡಿದ್ದರು.
ಆದರೆ, ವಿರೋಧ ವ್ಯಕ್ತವಾದ ಬೆನ್ನಿಗೆ ಈ ಟ್ವೀಟ್ ಅನ್ನು ಕೆಲವೇ ನಿಮಿಷಗಳಲ್ಲಿ ಡಿಲೀಟ್ ಮಾಡಲಾಗಿದೆ. ಅಲ್ಲದೆ ಈ ಕುರಿತು ಟ್ವೀಟ್ ನಲ್ಲಿಯೇ ಪ್ರತಿಕ್ರಿಯೆ ನೀಡಿರುವ ಅನಂತಕುಮಾರ್ ಹೆಗಡೆ, “ಕಳೆದ ಒಂದು ವಾರದಲ್ಲಿ ನನ್ನ ಟ್ವೀಟರ್ ಅಕೌಂಟ್ ಅನ್ನು ಎರಡು ಬಾರಿ ಹ್ಯಾಕ್ ಮಾಡಲಾಗಿದೆ. ಗೋಡ್ಸೆ ಕುರಿತು ಈಗ ನನ್ನ ಟ್ವೀಟರ್ ಅಕೌಂಟ್ನಲ್ಲಿ ಬರೆಯಲಾಗಿದ್ದ ಪೋಸ್ಟ್ ಅನ್ನು ಡಿಲೀಟ್ ಮಾಡಲಾಗಿದೆ. ಹಾಗೂ ನನ್ನ ಅಕೌಂಟಿನಲ್ಲಿ ಇಂತಹ ಪೋಸ್ಟ್ ಬಂದಿದಕ್ಕೆ ವಿಷಾಧಿಸುತ್ತೇನೆ” ಎಂದು ತಿಳಿಸಿದ್ದಾರೆ.
ಅಲ್ಲದೆ ಮತ್ತೊಂದು ಟ್ವೀಟ್ನಲ್ಲಿ “ಗಾಂಧಿ ಹತ್ಯೆಯನ್ನು ಸಮರ್ಥಿಸಿಕೊಳ್ಳುವ ಮಾತೆ ಇಲ್ಲ. ಯಾರೂ ಸಹ ಗಾಂಧಿ ಹತ್ಯೆಯನ್ನು ನ್ಯಾಯಪಡಿಸುವ ಹಾಗೂ ಗೋಡ್ಸೆ ಪರ ಕರುಣೆ ತೋರಿಸುತ್ತಿಲ್ಲ. ದೇಶಕ್ಕೆ ಗಾಂಧಿ ನೀಡಿದ ಕೊಡುಗೆಯ ಕುರಿತು ನಮಗೆ ಸಾಕಷ್ಟು ಗೌರವವಿದೆ” ಎಂದು ಬರೆದುಕೊಳ್ಳುವ ಮೂಲಕ ವಿವಾದದ ಬಲೆಯಿಂದ ಹೊರ ಬರಲು ಪ್ರಯತ್ನಿಸಿದ್ದರು. ಆದರೆ, ಬಿಟ್ಟೂ ಬಿಡದೆ ಯಾವಾಗಲೂ ವಿವಾದಗಳ ಬೆನ್ನೇರಿಯೇ ನಡೆಯುವ ಅನಂತಕುಮಾರ್ ಹೆಸರಿಗೆ ಕೊನೆಗೆ ಗಾಂಧಿ ವಿವಾದವೂ ಅಂಟಿಕೊಂಡಿದೆ. ಪರಿಣಾಮ ಪಕ್ಷ ಶಿಸ್ತು ಕ್ರಮಕ್ಕೆ ಮುಂದಾಗಿದೆ.
ಶಿಸ್ತು ಕ್ರಮಕ್ಕೆ ಮುಂದಾದ ಬಿಜೆಪಿ : ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಹೇಳುವ ಮೂಲಕ ಗಾಂಧಿಗೆ ಅಪಮಾನಿಸಲಾಗಿದೆ. ಈ ಕಾರಣಕ್ಕೆ ಸಾಧ್ವಿ ಪ್ರಜ್ಞಾ ಸಿಂಗ್, ನಳಿನ್ ಕುಮಾರ್ ಕಟೀಲ್ ಹಾಗೂ ಅನಂತ ಕುಮಾರ್ ಮೂವರ ವಿರುದ್ಧವೂ ಬಿಜೆಪಿ ಪಕ್ಷ ಶಿಸ್ತು ಕ್ರಮಕ್ಕೆ ಮುಂದಾಗಿದೆ. ಅಲ್ಲದೆ ಈ ಕುರಿತು 10 ದಿನದೊಳಗಾಗಿ ಶಿಸ್ತುಕ್ರಮ ಸಭೆಯ ಮುಂದೆ ಹಾಜರಾಗಿ ವಿವರಣೆ ನೀಡಬೇಕು ಎಂದು ತಾಕೀತು ಮಾಡಿದೆ.
ಸಾಧ್ವಿ ಪ್ರಜ್ಞಾ ಸಿಂಗ್, ನಳಿನ್ ಕುಮಾರ್ ಕಟೀಲ್ ಹಾಗೂ ಅನಂತ್ ಕುಮಾರ್ ಹೇಳಿಕೆಯಿಂದ ಚುನಾವಣಾ ಸಂದರ್ಭಲ್ಲಿ ಬಿಜೆಪಿ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟಾಗಿದ್ದು ಪಕ್ಷ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಅಲ್ಲದೆ ಈ ಮೂವರ ವಿರುದ್ಧ ಕಠಿಣ ಕ್ರಮಕ್ಕೂ ಮುಂದಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.