ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ-ನಾಮಪತ್ರ ಸಲ್ಲಿಕೆ ಅವಧಿ ಮುಕ್ತಾಯ

ಬೆಂಗಳೂರು, ಮೇ 16- ರಾಜ್ಯದ ಮಿನಿ ಮಹಾಸಮರವೆಂದೇ ಪರಿಗಣಿಸಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಾಮಪತ್ರ ಸಲ್ಲಿಕೆ ಅವಧಿ ಇಂದು ಮುಕ್ತಾಯಗೊಂಡಿದೆ.

ಲೋಕಸಭೆ ಹಾಗೂ ವಿಧಾನಸಭೆ ಉಪಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್-ಜೆಡಿಎಸ್ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದು, ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಡುವೆ ಪೈಪೋಟಿ ಏರ್ಪಡುವ ಸಾಧ್ಯತೆಗಳಿವೆ.

ಲೋಕಸಭೆ ಚುನಾವಣೆ ಕಾವು ತಣ್ಣಗಾಗುವ ಮೊದಲೇ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಎದುರಾಗಿದ್ದು, ಅವಧಿ ಮುಗಿದಿರುವ 8 ನಗರಸಭೆಗಳು, 33 ಪುರಸಭೆಗಳು, 22 ಪಟ್ಟಣ ಪಂಚಾಯ್ತಿಗಳಿಗೆ ಚುನಾವಣೆ ನಡೆಯುತ್ತಿದೆ. ಅಲ್ಲದೆ, ವಿವಿಧ ಕಾರಣಗಳಿಗಾಗಿ ತೆರವಾಗಿರುವ ಬೆಂಗಳೂರು ನಗರದ ಹೆಬ್ಬಗೋಡಿ ನಗರಸಭೆ ವಾರ್ಡ್ ನಂ.26, ಬೆಳಗಾವಿ ಜಿಲ್ಲೆ ಸದಲಗಾ ಪುರಸಭೆ ವಾರ್ಡ್ ನಂ. 19, ಮುಗಳಖೋಡ ಪುರಸಭೆ ವಾರ್ಡ್ ನಂ.2, ಬಿಬಿಎಂಪಿಯ ಸಗಾಯಿಪುರ ವಾರ್ಡ್ ನಂ.60, ಕಾವೇರಿಪುರದ ವಾರ್ಡ್ ನಂ.103, ತುಮಕೂರು ಮಹಾನಗರ ಪಾಲಿಕೆ ವಾರ್ಡ್ ನಂ.22ಕ್ಕೆ ಉಪಚುನಾವಣೆಗಳು ನಡೆಯುತ್ತಿದ್ದು, ಮೇ 9ರಂದು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗಿತ್ತು.ಅಂದಿನಿಂದ ಇಂದಿನವರೆಗೂ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು.ಇಂದು ಸಂಜೆ ವೇಳೆಗೆ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಕ್ರಮಬದ್ಧವಾಗಿರುವ ನಾಮಪತ್ರಗಳ ಹಾಗೂ ತಿರಸ್ಕøತಗೊಂಡ ನಾಮಪತ್ರಗಳ ಪಟ್ಟಿಯನ್ನು ಆಯಾ ಚುನಾವಣಾಧಿಕಾರಿಗಳು ಸಂಜೆ ವೇಳೆಗೆ ಪ್ರಕಟಿಸಲಿದ್ದಾರೆ.

ಮೇ 20ರವರೆಗೂ ನಾಮಪತ್ರ ವಾಪಸ್ ಪಡೆಯಲು ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ.ಮೇ 29ರಂದು ಬೆಳಗ್ಗೆ 7 ರಿಂದ ಸಂಜೆ 5 ಗಂಟೆವರೆಗೂ ಚುನಾವಣೆಗಳು ನಡೆಯಲಿವೆ.

ಅಗತ್ಯವಿದ್ದಲ್ಲಿ ಮೇ 30ರಂದು ಮರುಮತದಾನ ನಡೆಯಲಿದೆ.ಮೇ 31ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಂಡ ನಂತರ ಚುನಾವಣಾ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ.

ಮೇ 2ರಂದು ಚುನಾವಣೆ ಘೋಷಣೆಯಾಗಿದ್ದು, ಅಂದಿನಿಂದಲೇ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ.ಇದೇ ತಿಂಗಳಲ್ಲೇ ಗ್ರಾಮೀಣ ಭಾಗದ ಗ್ರಾಮ ಪಂಚಾಯತ್ ಮತ್ತು ತಾಲೂಕು ಪಂಚಾಯತ್‍ಗಳಿಗೆ ಉಪಚುನಾವಣೆ ನಡೆಯಲಿದ್ದು, ಅವುಗಳಿಗೆ ಮೇ 13ರಿಂದ ಅಧಿಸೂಚನೆ ಜಾರಿಯಾಗಿದೆ.

ಈಗಾಗಲೇ ಕಳೆದ ವರ್ಷದ ಆಗಸ್ಟ್‍ನಲ್ಲಿ 109 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿತ್ತು.ಬಾಕಿ ಇರುವ 103 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಬೇಕಾಗಿತ್ತಾದರೂ ಬಹುತೇಕ ಎಲ್ಲಾ ಜಿಲ್ಲಾ ಕೇಂದ್ರಗಳ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ ಮೀಸಲಾತಿ ಹಾಗೂ ಕ್ಷೇತ್ರ ವಿಂಗಡಣೆ ವಿವಾದಗಳು ನ್ಯಾಯಾಲಯದಲ್ಲಿರುವುದರಿಂದ ಬಹುತೇಕ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ