ನವದೆಹಲಿ, ಮೇ 15-ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಒಬ್ಬ ಉತ್ತಮ ನಾಯಕ. ದೇಶದ ಬಗ್ಗೆ ಅತೀವ ಕಾಳಜಿ ಹೊಂದಿದ್ದಾರೆ. ಬಿಜೆಪಿಯೇತರ ಪಕ್ಷಗಳು ಕಾಂಗ್ರೆಸ್ನನ್ನು ಹೊರಗಿಡುವಂತಹ ತಪ್ಪನ್ನು ಈ ಬಾರಿ ಮಾಡುವುದಿಲ್ಲ ಎಂದು ತೆಲುಗುದೇಶಂ ಪಾರ್ಟಿ ಮುಖ್ಯಸ್ಥ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಇದರೊಂದಿಗೆ ಕೇಂದ್ರದಲ್ಲಿ ಬಿಜೆಪಿಯೇತರ ಸಮಾನಮನಸ್ಕ ಪಕ್ಷಗಳು ಸರ್ಕಾರ ರಚಿಸುವ ಪ್ರಯತ್ನಕ್ಕೆ ಆಶಾಭಾವನೆ ಮೂಡಿದಂತಾಗಿದೆ. ಪೂರ್ವ ಮಿಡ್ನಾಪೋರ್ಜಿಲ್ಲೆಯ ಹಲ್ದಿಯಾದಲ್ಲಿ ನಡೆದ ಚುನಾವಣಾ ಸಭೆಯ ಬಳಿಕ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಬಿಜೆಪಿ ತನ್ನ ದಾರಿ ತಪ್ಪುತ್ತಿದೆಯಲ್ಲದೆ ಒಕ್ಕೂಟ ಸರ್ಕಾರಕ್ಕೆ ಯತ್ನ ಮುಂದುವರೆಸಿದೆ. ಇದರ ಪರ್ಯಾಯವಾಗಿ ಸಮಾನ ಮನಸ್ಕ ಪಕ್ಷಗಳು ಪರಿಸ್ಥಿತಿಯನ್ನು ಪರಿಶೀಲಿಸಿ ಸಮತೋಲನ ಕಾಯ್ದುಕೊಳ್ಳುವುದು ಉತ್ತಮ ಎಂದರು.
ಬಿಜೆಪಿಗೆ ಪರ್ಯಾಯವಾಗಿ ರಚನೆಯಾಗಲಿರುವ ಸಮಾನ ಮನಸ್ಕ ಮಿತ್ರ ಪಕ್ಷಗಳ ಒಮ್ಮತದ ಪ್ರಧಾನಿ ಯಾರಾಗಲಿದ್ದಾರೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇಂತಹ ಸಮ್ಮಿಶ್ರ ಸರ್ಕಾರ ರಚಿಸಲು ಪ್ರಾದೇಶಿಕ ಪಕ್ಷಗಳು ತೀವ್ರ ಅನಿವಾರ್ಯವಾಗಿವೆ. ಪ್ರತಿ ಪಕ್ಷಗಳು ಪಡೆಯುವ ಸೀಟುಗಳ ಸಂಖ್ಯೆಯ ಮೂಲಕ ಈ ಬಗ್ಗೆ ಸರ್ವಾನುಮ್ಮತ ನಿರ್ಧಾರಕ್ಕೆ ಬರಲಾಗುವುದು ಎಂದು ಹೇಳಿದರು.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸೋಲುವ ಸಂಭವವನ್ನು ಅರಿತಿರುವ ಪ್ರಧಾನಿ ನರೇಂದ್ರ ಮೋದಿ ಹತಾಶರಾಗಿದ್ದಾರೆ ಎಂದರು.
ಪ್ರಧಾನಿ ಮೋದಿ ಅವರ ಸಾಧನೆ ಶೂನ್ಯ. ಹಾಗಾಗಿಯೇ ಅವರು ಪುಲ್ವಾಮಾ (ಭಯೋತ್ಪಾದನಾ ದಾಳಿ) ಮತ್ತು (ಬಾಲಕಟ್) ವಾಯುದಾಳಿಗಳ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದಾರೆ. ಅಲ್ಲದೆ ಪ್ರತಿ ಸಭೆ, ರ್ಯಾಲಿಗಳಲ್ಲೂ ಪ್ರತಿಭಟನಾ ನಾಯಕರನ್ನು ದೂಷಿಸುತ್ತಿದ್ದಾರೆ ಮತ್ತು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಅಭಿಯಾನದ ಮೂಲಕ ಹೋದರೆ ಮೋದಿಯವರು ಮೊದಲು ದುರ್ಬಲರಾಗಿದ್ದರು ಆದರೆ ಮಾಧ್ಯಮದವರನ್ನು ನಿರ್ವಹಿಸುತ್ತಿದ್ದರು. ಎಲ್ಲಾ ರಾಜಕಾರಣಿಗಳಿಗೆ ಬೆದರಿಕೆ ಹಾಕಿದ್ದಾರೆ, ಯಾರೂ ಕೂಡ ಇವರ ವಿರುದ್ಧ ತಮ್ಮ ಧ್ವನಿಯನ್ನು ಎತ್ತುತ್ತಿಲ್ಲ ಎಂದು ನಾಯ್ಡು ಹೇಳಿದರು.
ಕಾಂಗ್ರೆಸ್ ಒಳಗೊಂಡಂತೆ ಪ್ರಾದೇಶಿಕ ಪಕ್ಷಗಳ ಮೈತ್ರಿಯೊಂದಿಗೆ ಸರ್ಕಾರ ರಚನೆ ಸಾಧ್ಯವಾದರೆ ಅದನ್ನು ಹೊರಡಗಿಡಲಾಗುತ್ತದೆಯೇ ಎಂಬ ಪ್ರಶ್ನೆಗೆ, ಅಂತಹ ನಿರ್ಬಂಧಗಳನ್ನು ಹೊಂದಿಲ್ಲ ಮತ್ತು ಸರ್ಕಾರ ರಚಿಸುವ ಮ್ಯಾಜಿಕ್ ಸಂಖ್ಯೆ(272 ಸ್ಥಾನಗಳು)ಯ ಅಗತ್ಯವಿದೆ. ನಾವೆಲ್ಲರೂ ಒಟ್ಟಾಗಿ ಕುಳಿತು ಈ ದೇಶದ ಭವಿಷ್ಯ ನಿರ್ಮಿಸಲು ಒಮ್ಮತದ ತೀರ್ಮಾನಕ್ಕೆ ಬರುತ್ತೇವೆ ಎಂದು ನಾಯ್ಡು ಹೇಳಿದರು.
ರಾಹುಲ್ ಗಾಂಧಿ ಹೆಸರನ್ನು ಪ್ರಧಾನಿ ಅಭ್ಯರ್ಥಿಯಾಗಿ ಪ್ರಸ್ತಾಪಿಸಬಹುದೇ ಎಂಬ ಪ್ರಶ್ನೆಗೆ, ರಾಹುಲ್ ಬಗ್ಗೆ ಇಂಗಿತ ವ್ಯಕ್ತಪಡಿಸಿದ ನಾಯ್ಡು, ಅವರ ಹೆಸರು ಪ್ರಸ್ತಾಪಿಸಿದರೆ ಮೈತ್ರಿಯಲ್ಲಿನ ಏಕತೆಗೆ ಧಕ್ಕೆಯಾಗಬಹುದು ಎಂದರು.
ರಾಹುಲ್ ಗಾಂಧಿ ಒಳ್ಳೆಯ ನಾಯಕನಾಗಿದ್ದು, ರಾಷ್ಟ್ರದ ಬಗ್ಗೆ ಕಾಳಜಿಹೊಂದಿದ್ದಾರೆ. ಮೋದಿಯವರಂತೆ ಬೆದರಿಕೆವೊಡ್ಡಿ ಆಡಳಿತ ನಡೆಸುವ ನಾಯಕನಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.