ಹಾಸನ: ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಗೆಲುವಿನ ವಿಶ್ವಾಸದಲ್ಲಿರುವ ಪ್ರಜ್ವಲ್ ರೇವಣ್ಣಗೆ ಕಂಟಕ ಎದುರಾಗಿದೆ. ನಾಮಪತ್ರ ಸಲ್ಲಿಕೆ ವೇಳೆ ಮಾಡಿರುವ ಎಡವಟ್ಟಿನಿಂದಾಗಿ ಅವರು, ಈ ಬಾರಿ ಗೆದ್ದರೂ ಸಂಭ್ರಮಾಚರಣೆ ಮಾಡುವುದು ಕಷ್ಟ ಎಂಬಂತಹ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ.
ಮೊದಲ ಬಾರಿ ಚುನಾವಣೆ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ, ಅಫಿಡವಿಟ್ ಸಲ್ಲಿಸುವಾಗ ತಪ್ಪು ಮಾಹಿತಿ ನೀಡಿರೋದು ಚುನಾವಣಾ ಆಯೋಗದ ತನಿಖೆಯಲ್ಲಿ ಬಯಲಾಗಿದೆ. ನಾಮಪತ್ರ ಸಲ್ಲಿಕೆ ವೇಳೆ ಅಫಿಡವಿಟ್ನಲ್ಲಿ ಚೆನ್ನಾಂಬಿಕಾ ಕನ್ವೆನ್ಷನ್ ಹಾಲ್ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ. ಅಲ್ಲದೇ ತಾತ ಹೆಚ್.ಡಿ ದೇವೇಗೌಡ ಸಾಲ ನೀಡಿದ ಬಗ್ಗೆಯೂ ಉಲ್ಲೇಖಿಸಿಲ್ಲ.
ಆದರೆ, ದೇವೇಗೌಡರು ತುಮಕೂರಿನಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಮೊಮ್ಮಗ ಪ್ರಜ್ವಲ್ಗೆ 26 ಲಕ್ಷ ರೂ. ಸಾಲ ನೀಡಿರುವುದಾಗಿ ಉಲ್ಲೇಖಿಸಿದ್ದಾರೆ. ಆದರೆ, ಪ್ರಜ್ವಲ್ ರೇವಣ್ಣ ಸಲ್ಲಿಸಿದ ಅಫಿಡವಿಟ್ನಲ್ಲಿ ಈ ಸಾಲ ಪಡೆದ ಬಗ್ಗೆ ಮಾಹಿತಿಯನ್ನೇ ನೀಡಿಲ್ಲ. ಈ ಬಗ್ಗೆ ವಕೀಲ ದೇವರಾಜೇಗೌಡ ಎಂಬುವರು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದು, ಪ್ರಜ್ವಲ್ ರೇವಣ್ಣಗೆ ಸಂಕಷ್ಟ ಎದುರಾಗಿದೆ.
ಇನ್ನು ದೂರಿನ ಆಧಾರದ ಮೇಲೆ ಜಿಲ್ಲಾ ಚುನಾವಣಾಧಿಕಾರಿಗೆ ಚುನಾವಣಾ ಆಯೋಗ ತನಿಖೆಗೆ ಸೂಚನೆ ನೀಡಿದೆ. ಆಯೋಗದ ಸೂಚನೆಯಂತೆ ತನಿಖೆ ನಡೆಸಿದ ಅಧಿಕಾರಿಗಳು ಅಫಿಡವಿಟ್ನಲ್ಲಿ ತಪ್ಪು ಮಾಹಿತಿ ನೀಡಿರುವ ಬಗ್ಗೆ ವರದಿಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ವರದಿ ಆಧರಿಸಿ ಕ್ರಮಕೈಗೊಳ್ಳುವಂತೆ ಹಾಸನ ಜಿಲ್ಲಾಧಿಕಾರಿಗೆ ಚುನಾವಣಾ ಆಯೋಗ ನಿರ್ದೇಶನ ನೀಡಿದೆ. ಇದು ಪ್ರಜ್ವಲ್ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ.
ಮೊದಲ ಬಾರಿ ಚುನಾವಣಾ ಕಣಕ್ಕೆ ಇಳಿದು ತಾತನಂತೆ ಪಾರ್ಲಿಮೆಂಟ್ ಮೆಟ್ಟಿಲು ಹತ್ತುವ ಕನಸು ಕಾಣುತ್ತಿರುವ ಪ್ರಜ್ವಲ್ಗೆ ಈ ತಪ್ಪು ಉರುಳಾಗುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ.
ಪ್ರಜ್ವಲ್ ನಾಮಪತ್ರ ಸಲ್ಲಿಸುವ ಗಡಿಬಿಡಿಯಲ್ಲಿ ಕೂಲಂಕಷವಾಗಿ ನಾಮಪತ್ರ ಪರಿಶೀಲನೆ ನಡೆಸದ ಹಿನ್ನೆಲೆಯಲ್ಲಿ ಈ ಎಡವಟ್ಟು ಸಂಭವಿಸಿದೆ ಎನ್ನಲಾಗಿದೆ. ಆದರೆ ಅಫಿಡವಿಟ್ನಲ್ಲಿ ತಪ್ಪು ಮಾಹಿತಿ ಬಗ್ಗೆ ಪ್ರಜಾಪ್ರತಿನಿಧಿ ಕಾಯ್ದೆ 1951 125 A ಪ್ರಕಾರ ಕ್ರಮಕ್ಕೆ ಮುಂದಾಗುವಂತೆ ಹಾಸನ ಡಿಸಿಗೆ ಸೂಚನೆ ನೀಡಿದೆ. ಒಂದು ವೇಳೆ ಚುನಾವಣೆಯಲ್ಲಿ ಅಭ್ಯರ್ಥಿ ಗೆದ್ದರೂ ಅವರ ಪ್ರಮಾಣ ಪತ್ರವನ್ನು ತಡೆ ಹಿಡಿಯುವ ಅಧಿಕಾರ ಜಿಲ್ಲಾಧಿಕಾರಿಗೆ ಇದೆ. ಈ ಹಿನ್ನೆಲೆ ಪ್ರಜ್ವಲ್ ಗೆದ್ದರೂ ಅವರಿಗೆ ಸಂಕಷ್ಟ ತಪ್ಪಿದ್ದಲ್ಲ. ಇದರಿಂದಾಗಿ ಸದ್ಯಕ್ಕೆ ಆಯೋಗ ನೀಡಿರುವ ಆದೇಶ ಪ್ರಜ್ವಲ್ಗೆ ಬಿಸಿ ತುಪ್ಪವಾಗಿದೆ.
ಪ್ರಜ್ವಲ್ ರೇವಣ್ಣ ನಾಮಪತ್ರದಲ್ಲಿನ ತಪ್ಪು ಬಿಜೆಪಿ ಅಭ್ಯರ್ಥಿಗೆ ಎ. ಮಂಜುಗೆ ವರದಾನವಾಗಲಿದೆ. ಕಾರಣ ಒಂದು ವೇಳೆ ಎ ಮಂಜುಗಿಂತ ಪ್ರಜ್ವಲ್ ರೇವಣ್ಣ ಲೀಡ್ ಪಡೆದರು. ಈ ಅಂಶವನ್ನು ಹಿಡಿದುಕೊಂಡು ಮಂಜು ನ್ಯಾಯಾಲಯದ ಮೆಟ್ಟಿಲು ಏರಬಹುದು. ಗೆದ್ದ ಅಭ್ಯರ್ಥಿ ನಾಮಪತ್ರ ತಪ್ಪಿದ್ದರೆ ಅದನ್ನು ಪ್ರಶ್ನೆ ಮಾಡಿ, ಎರಡನೇ ಸ್ಥಾನ ಪಡೆದವರು ನ್ಯಾಯಾಲಯದ ಮೊರೆ ಹೋಗಬಹುದು. ಗೆಲುವನ್ನು ಅನೂರ್ಜಿತಗೊಳಿಸುವಂತೆ ಕೋರ್ಟ್ ಮನವಿ ಸಲ್ಲಿಸಬಹುದು.
ಈ ರೀತಿಯ ಎಡವಟ್ಟಿನ ಕುರಿತು ಉಚ್ಚ ನ್ಯಾಯಾಲಯ ದ ಆದೇಶದ ಪ್ರಕಾರ ಕೋರ್ಟ್ ಮೂರು ತಿಂಗಳೊಳಗೆ ತೀರ್ಪು ನೀಡಬೇಕು. ಈ ವೇಳೆ ನ್ಯಾಯಾಲಯದಲ್ಲೂ ಸುಳ್ಳು ಅಫಿಡವಿಟ್ಟು ಸಾಬೀತಾದರೆ ಎರಡನೇ ಸ್ಥಾನ ಪಡೆದವರಿಗೆ ಸಂಸದರೆಂದು ಘೋಷಿಸುವ ಅವಕಾಶ ಇದೆ. ಅಲ್ಲದೇ 6 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸುವಂತೆ ಇಲ್ಲ. ಇದರಿಂದಾಗಿ ಬಿಜೆಪಿ ನಾಯಕರು ಈ ತಪ್ಪಿನ ಲಾಭ ಪಡೆಯುವ ಸಾಧ್ಯತೆ ಕೂಡ ಇದೆ.
ಜಿಲ್ಲಾಧಿಕಾರಿ ಕೈಯಲ್ಲಿ ಪ್ರಜ್ವಲ್ ಭವಿಷ್ಯ
ಫಲಿತಾಂಶ ಪ್ರಕಟಣೆಗೆ ಇನ್ನೇನು ಒಂದು ವಾರ ಬಾಕಿಯಿರುವ ಸಮಯದಲ್ಲಿ ಉಂಟಾಗಿರುವ ಈ ಸಮಸ್ಯೆಯಿಂದ ಪ್ರಜ್ವಲ್ ಕಂಗಾಲಾಗಿರುವುದು ಸುಳ್ಳಲ್ಲ.
ಈಗಾಗಲೇ ಗೆಲುವಿನ ವಿಶ್ವಾಸದಲ್ಲಿರುವ ಪ್ರಜ್ವಲ್ ಭಾರೀ ಬಹುಮತದಿಂದ ಗೆದ್ದರೂ ಸಂಭ್ರಮ ಪಡುವ ಪರಿಸ್ಥಿತಿ ಉಂಟಾಗಿವುದಿಲ್ಲ. ಸದ್ಯ ಆಯೋಗದ ಸೂಚನೆ ಮೇಲೆ ಈ ಕುರಿತು ಜಿಲ್ಲಾಧಿಕಾರಿ ತೀರ್ಮಾನದ ಮೇಲೆ ಪ್ರಜ್ವಲ್ ರಾಜಕೀಯ ನಿಂತಿದ್ದು ಏನಾಗಲಿದೆ ಎಂದು ಕಾದು ನೋಡಬೇಕಿದೆ.