ನವದೆಹಲಿ, ಮೇ 15- ಈ ಬಾರಿಯ ಮುಂಗಾರು ವಾಡಿಕೆಗಿಂತ 5 ದಿನ ತಡವಾಗಿ ಅಂದರೆ ಜೂ.6ರಂದು ಕೇರಳ ಕರಾವಳಿಯನ್ನು ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಟಿ) ಇಂದು ತಿಳಿಸಿದೆ.
ಜೂ.4ರಂದು ಮುಂಗಾರು ಕೇರಳವನ್ನು ಪ್ರವೇಶಿಸುತ್ತದೆ ಎಂದು ನಿನ್ನೆ ತಿಳಿಸಲಾಗಿತ್ತಾದರೂ ಉಪಗ್ರಹ ಮಾಹಿತಿ ಪ್ರಕಾರ ಎರಡು ದಿನ ತಡವಾಗಿ ಅಂದರೆ ಜೂ.6ರಂದು ಕೇರಳ ಮೂಲಕ ದಕ್ಷಿಣ ಭಾರತದ ರಾಜ್ಯಗಳನ್ನು ಪ್ರವೇಶಿಸಲಿದೆ ಎಂದು ಐಎಂಡಿ ತಿಳಿಸಿದೆ.
ವಾಡಿಕೆಯಂತೆ ಜೂ.1ರಂದು ಮುಂಗಾರು ಪ್ರವೇಶಿಸಬೇಕಿತ್ತು. ಆದರೆ ಈ ಬಾರಿ ಐದು ದಿನಗಳು ತಡವಾಗಿದೆ. ಅಲ್ಲದೆ ಈ ಬಾರಿ ಸಾಮಾನ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಲಿದೆ.
ಮುಂಗಾರು ಮಾರುತಗಳು ಕೇರಳದ ವಯನಾಡು ಘಟ್ಟ ಪ್ರದೇಶಗಳ ಮೂಲಕ ಕರಾವಳಿ ರಾಜ್ಯವನ್ನು ತಲುಪಿ ಕರ್ನಾಟಕ ಮತ್ತಿತರ ರಾಜ್ಯಗಳನ್ನು ಪ್ರವೇಶಿಸಲಿದೆ ಎಂದು ಐಎಂಡಿ ತಿಳಿಸಿದೆ.