ಬೆಂಗಳೂರು, ಮೇ 15-ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಟೈಂ ಬಾಂಬ್ ಎಕ್ಸ್ಪರ್ಟ್ ಆಗಿದ್ದು, ತಮ್ಮ ಅಸ್ತಿತ್ವ ತೋರಿಸಿಕೊಳ್ಳಲು ಆಗಾಗ್ಗೆ ಜೋಕುಗಳನ್ನು ಮಾಡುತ್ತಿರುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ನಿನ್ನೆಯವರೆಗೂ ಜೆಡಿಎಸ್ ನಾಯಕರ ವಿರುದ್ಧ ಟ್ವಿಟರ್ನಲ್ಲಿ ಫೈರಿಂಗ್ ಮಾಡುತ್ತಿದ್ದ ಸಿದ್ದರಾಮಯ್ಯ ಇಂದು ತಮ್ಮ ರಾಜಕೀಯ ವಾಗ್ದಾಳಿಯ ಗುರಿಯನ್ನು ಬಿಜೆಪಿ ನಾಯಕರತ್ತ ತಿರುಗಿಸಿದ್ದಾರೆ.
ನಿನ್ನೆ ಟ್ವೀಟ್ ಮಾಡಿದ ಜಗದೀಶ್ ಶೆಟ್ಟರ್ ಅವರು ದೋಸ್ತಿ ಸರ್ಕಾರಕ್ಕೆ ಸಿದ್ದರಾಮಯ್ಯನವರೇ ಕಂಟಕವಾಗಿದ್ದಾರೆ. ಈಗಾಗಲೇ ಮೈತ್ರಿ ಸರ್ಕಾರದ ಪತನಕ್ಕೆ ಸಮಯ ಫಿಕ್ಸ್ ಆಗಿದೆ. ನೇರವಾಗಿ ಹೇಳದೆ ತಮ್ಮ ಶಾಸಕರ ಬಾಯಿಂದ ಮುನ್ಸೂಚನೆ ನೀಡುತ್ತಿದ್ದಾರೆ. ಮೇ 23ರ ನಂತರ ಮೈತ್ರಿ ಸರ್ಕಾರದಲ್ಲಾಗುವ ಬದಲಾವಣೆಗಳಿಂದ ಯಾರೂ ಆಶ್ಚರ್ಯಪಡಬೇಕಿಲ್ಲ ಎಂದಿದ್ದರು.
ಅದಕ್ಕೆ ಇಂದು ತಿರುಗೇಟು ನೀಡಿರುವ ಸಿದ್ದರಾಮಯ್ಯ ಅವರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದಾಗಿ ಪಕ್ಷದಲ್ಲಿ ಮೂಲೆಗುಂಪಾಗಿರುವ ಟೈಂ ಬಾಂಬ್ ಎಕ್ಸ್ಫರ್ಟ್ ಜಗದೀಶ್ ಶೆಟ್ಟರ್ ತಮ್ಮ ರಾಜಕೀಯ ಅಸ್ತಿತ್ವ ತೋರಿಸಿಕೊಳ್ಳಲು ಆಗಾಗ್ಗೆ ಇಂತಹ ಜೋಕ್ಗಳನ್ನು ಮಾಡುತ್ತಿರುತ್ತಾರೆ. ಅವರನ್ನು ಪಕ್ಷದ ಹೊರಗೆ ಹಾಗೂ ಒಳಗೆ ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬುದೇ ಅವರ ಕೊರಗು. ಪಕ್ಷದೊಳಗಿನ ರಾಜಕೀಯ ವಿರೋಧಿ ಯಡಿಯೂರಪ್ಪ ಅವರಿಗೆ ಇಡ್ತಾ ಇರುವ ಟೈಂ ಬಾಂಬ್ಗಳೆಲ್ಲ ಠುಸ್ ಆಗುತ್ತಿರುವುದಕ್ಕೆ ಅವರು ಹತಾಶರಾಗಿದ್ದಾರೆ. ಅವರಿಗೆ ಸರಿಯಾಗಿ ಒಂದು ವರ್ಷ ಮುಖ್ಯಮಂತ್ರಿಯಾಗಲು ಯಡಿಯೂರಪ್ಪ ಬಿಟ್ಟಿಲ್ಲ. ಪಾಪ..ಜಗದೀಶ್ಶೆಟ್ಟರ್ ಬಗ್ಗೆ ನನಗೆ ಅನುಕಂಪ ಇದೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ನಿನ್ನೆಯವರೆಗೂ ಸಿದ್ದರಾಮಯ್ಯ ಹಾಗೂ ಜೆಡಿಎಸ್ ನಾಯಕರಾದ ಎಚ್.ವಿಶ್ವನಾಥ್ ಅವರ ನಡುವೆ ವಾಗ್ದಾಳಿಗಳು ರಾಜಕೀಯವಾಗಿ ಭಾರೀ ಚರ್ಚೆಗೆ ಗ್ರಾಸವಾಗಿದ್ದವು. ಇನ್ನೇನು ಸಮ್ಮಿಶ್ರ ಸರ್ಕಾರ ಬಿದ್ದೇ ಹೋಗಲಿದೆ ಎಂಬ ಗಂಭೀರ ಸ್ವರೂಪಕ್ಕೆ ಆರೋಪ-ಪ್ರತ್ಯಾರೋಪಗಳು ನಡೆದಾಗ ಎರಡೂ ಪಕ್ಷಗಳ ಉನ್ನತ ನಾಯಕರು ಮಧ್ಯಪ್ರವೇಶಿಸಿ ಶಾಂತಿ ಸಂಧಾನ ನಡೆಸಿದ್ದಾರೆ. ಹೀಗಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್, ಸಚಿವ ಜಿ.ಟಿ.ದೇವೇಗೌಡ ಅವರು ತಾತ್ಕಾಲಿಕ ಯುದ್ಧ ವಿರಾಮ ಘೋಷಿಸಿದ್ದಾರೆ. ಈಗ ಸಿದ್ದರಾಮಯ್ಯ ಅವರ ಟೀಕಾಸ್ತ್ರ ಬಿಜೆಪಿ ನಾಯಕರತ್ತ ತಿರುಗಿದೆ.
ಇಂದು ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಣದ ಪ್ರಚಾರ ಸಭೆಯಲ್ಲಿ ಮಾತನಾಡಿರುವ ಸಿದ್ದರಾಮಯ್ಯ, ಸುಮಲತಾ ಅವರಿಗೆ ಬಹಿರಂಗವಾಗಿ ಬೆಂಬಲ ನೀಡಿದ್ದು ಬಿಜೆಪಿಯವರೇ ಹೊರತು ನಾವಲ್ಲ. ಜಗದೀಶ್ ಶೆಟ್ಟರ್ ಅವರು ಅನಗತ್ಯವಾಗಿ ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಬೆಂಕಿ ಹಚ್ಚುವಲ್ಲಿ ನಿಸ್ಸೀಮರಾಗಿರುವ ಬಿಜೆಪಿ ನಾಯಕರು ಸುಳ್ಳು ಹೇಳುತ್ತಾ ತಿರುಗಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೈತ್ರಿ ಸರ್ಕಾರ 4 ವರ್ಷ ಸುಭದ್ರವಾಗಿರುತ್ತದೆ. ಉತ್ತಮ ಆಡಳಿತ ನೀಡುತ್ತಿದೆ. ಈ ವಿಷಯದಲ್ಲಿ ಯಾವುದೇ ಅನುಮಾನ ಬೇಡ ಎಂದು ಅವರು ಸ್ಪಷ್ಟಪಡಿಸಿದರು.