ನವದೆಹಲಿ, ಮೇ 15-ಹದಿನೇಳನೆ ಲೋಕಸಭೆಗೆ 543 ಸಂಸದರನ್ನು ಆಯ್ಕೆ ಮಾಡಲು ನಡೆಯುತ್ತಿರುವ ಮಹಾ ಚುನಾವಣೆಯ ಏಳನೇ ಮತ್ತು ಅಂತಿಮ ಹಂತದ ಮತದಾನ ಮೇ 19ರಂದು ಭಾನುವಾರ ನಡೆಯಲಿದೆ. ಈ ಹಿನ್ನಲೆಯಲ್ಲಿ ಸಿದ್ಧತಾ ಕಾರ್ಯಗಳ ಬಗ್ಗೆ ಪರಾಮರ್ಶಿಸಲು ಕೇಂದ್ರ ಚುನಾವಣಾ ಆಯೋಗ ಇಂದು ವೀಕ್ಷಕರು ಮತ್ತು ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಗಳ(ಸಿಇಒಗಳ) ಜತೆ ಸಭೆ ನಡೆಸಿತು.
ಆಯಾ ರಾಜ್ಯಗಳ ಸಿಇಒಗಳು ಮತ್ತು ಚುನಾವಣಾ ವೀಕ್ಷಕರೊಂದಿಗೆ ಆಯೋಗ ನಡೆಸಿದ ಪರಾಮರ್ಶೆ ಸಭೆಯಲ್ಲಿ ಅಂತಿಮ ಹಂತದ ಮತದಾನದ ಸಿದ್ದತೆ ಕುರಿತು ಮಾಹಿತಿಗಳನ್ನು ಪಡೆಯಲಾಯಿತು.
ಭಾನುವಾರ ಎಂಟು ರಾಜ್ಯಗಳ 59 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಉತ್ತರ ಪ್ರದೇಶ (13 ಲೋಕಸಭಾ ಕ್ಷೇತ್ರಗಳು), ಪಂಜಾಬ್(13), ಪಶ್ಚಿಮ ಬಂಗಾಳ(9), ಮಧ್ಯಪ್ರದೇಶ(8), ಬಿಹಾರ(8), ಮಾಚಲ ಪ್ರದೇಶ(4), ಜಾರ್ಖಂಡ್(3) ಹಾಗೂ ಚಂಡೀಗಢ(1)-ಈ ರಾಜ್ಯಗಳಲ್ಲಿ ಮತದಾನವಾಗಲಿದೆ. ಈ ಹಿನ್ನೆಲೆಯಲ್ಲಿ ಆಯಾ ರಾಜ್ಯಗಳ ಚುನಾವಣಾ ವೀಕ್ಷಕರು ಮತ್ತು ಚುನಾವಣಾಧಿಕಾರಿಗಳಿಂದ ಸಿದ್ಧತೆ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತದಲ್ಲಿ ನಿನ್ನೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರೋಡ್ ಶೋ ವೇಳೆ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ನಡುವೆ ವ್ಯಾಪಕ ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿಯೂ ಆಯೋಗದ ಅಧಿಕಾರಿಗಳು ಮುಖ್ಯ ಚುನಾವಣಾಧಿಕಾರಿ ಅವರೊಂದಿಗೆ ಮಹತ್ವದ ಸಮಾಲೋಚನೆ ನಡೆಸಿದ್ದಾರೆ.
ಬಿಜೆಪಿ ಮತ್ತು ಟಿಎಂಸಿ ಮುಖಂಡರು ಪರಸ್ಪರ ಆರೋಪ-ಪ್ರತ್ಯಾರೋಪಗಳೊಂದಿಗೆ ಆಯೋಗಕ್ಕೆ ದೂರು ನೀಡಿದ್ಧಾರೆ.