ಭೋಪಾಲ್:ಮಹಿಳೆಯೊಬ್ಬರ ಗುಪ್ತಾಂಗದಿಂದ ವೈದ್ಯರು 6 ಇಂಚಿನ ಪ್ಲಾಸ್ಟಿಕ್ ಹ್ಯಾಂಡಲನ್ನು ಹೊರತೆಗೆದ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.
ಪತಿ ಪ್ರಕಾಶ್ ಭಿಲ್ ಅಲಿಯಾಸ್ ರಾಮ(35) ಕೃತ್ಯದಿಂದ ಬರೋಬ್ಬರಿ 2 ವರ್ಷದಿಂದ ನೋವು ಅನುಭವಿಸುತ್ತಿದ್ದೇನೆ ಎಂದು 36 ವರ್ಷದ ಮಹಿಳೆ ಪೊಲೀಸರಲ್ಲಿ ತಮ್ಮ ನೋವು ತೋಡಿಕೊಂಡಿದ್ದಾರೆ. ಮಹಿಳೆ ದೂರು ನೀಡಿದ ಬಳಿಕ ಪೊಲೀಸರು ಪ್ರಕರಣ ಸಂಬಂಧ ಆಕೆಯ ಪತಿಯನ್ನು ಭಾನುವಾರ ಬಂಧಿಸಿದ್ದಾರೆ.
15 ವರ್ಷದ ಹಿಂದೆ ಮಹಿಳೆ ಪಶ್ಚಿಮ ಭೋಪಾಲ್ ನಿಂದ 251 ಕಿ.ಮೀ ದೂರದಲ್ಲಿರುವ ಧಾರ್ ಜಿಲ್ಲೆಯ ವ್ಯಕ್ತಿಯನ್ನು ಮದುವೆಯಾಗಿದ್ದರು. ಈ ದಂಪತಿಗೆ 6 ಮಂದಿ ಮಕ್ಕಳಿದ್ದಾರೆ. ಮಕ್ಕಳ ವಿಚಾರಕ್ಕೆ ಸಂಬಂಧಿಸಿದಂತೆ 2 ವರ್ಷಗಳ ಹಿಂದೆ ದಂಪತಿ ಮಧ್ಯೆ ಜಗಳ ಆರಂಭವಾಗಿದೆ. ಗಲಾಟೆ ತಾರಕಕ್ಕೇರಿ ಮಹಿಳೆಗೆ ಆಕೆಯ ಪತಿ ಚೆನ್ನಾಗಿ ಥಳಿಸಿದ್ದಾನೆ. ಅಲ್ಲದೆ ತನ್ನ ಬೈಕ್ ನಲ್ಲಿದ್ದ ಹ್ಯಾಂಡಲ್ ತೆಗೆದು ಪತ್ನಿಯ ಗುಪ್ತಾಂಗಕ್ಕೆ ತೂರಿದ್ದಾನೆ. ಆದರೆ ಮಹಿಳೆಗೆ ಈ ವಿಚಾರವನ್ನು ಇತರರೊಂದಿಗೆ ಹೇಳಿಕೊಳ್ಳಲು ನಾಚಿಕೆಯಾಗಿದೆ. ಅಲ್ಲದೆ ಮಕ್ಕಳ ಭವಿಷ್ಯದ ಬಗ್ಗೆ ಯೋಚನೆ ಮಾಡಿ 2 ವರ್ಷಗಳಿಂದ ನೋವು ಅನುಭವಿಸಿಕೊಂಡೇ ಬಂದಿದ್ದರು ಎಂದು ಚಂದನ್ ನಗರ ಪೊಲೀಸ್ ಠಾಣೆಯ ಅಧಿಕಾರಿ ರಾಹುಲ್ ಶರ್ಮಾ ತಿಳಿಸಿದ್ದಾರೆ.
ಪತ್ನಿಯ ಗುಪ್ತಾಂಗಕ್ಕೆ ಹ್ಯಾಂಡಲ್ ತೂರಿದ ಬಳಿಕ ರಾಮ ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದನು. ಈ ವಿಚಾರ ಪತ್ನಿಗೆ ತಿಳಿದು ಪತಿ ಜೊತೆ ಗಲಾಟೆ ಮಾಡಿಕೊಂಡಿದ್ದಾರೆ. ಆದರೂ ತನ್ನ ನೋವಿನ ಬಗ್ಗೆ ಯಾರೊಂದಿಗೂ ಈ ವಿಚಾರವನ್ನು ಹಂಚಿಕೊಂಡಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಕೆಲ ತಿಂಗಳ ಹಿಂದೆಯಿಂದ ನೋವು ತಡೆದುಕೊಳ್ಳಲು ಸಾಧ್ಯವಾಗದೇ ಮಹಿಳೆ ಸ್ಥಳೀಯ ಖಾಸಗಿ ಆಸ್ಪತ್ರೆಗೆ ತೆರಳಿದ್ದಾರೆ. ಆಗ ಪರೀಕ್ಷೆ ನಡೆಸದ ವೈದ್ಯರು ಕೂಡಲೇ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತೆ ಸೂಚಿಸಿದ್ದಾರೆ. ಅಲ್ಲದೆ ಇದಕ್ಕೆ 1 ಲಕ್ಷ ರೂ. ಹಣ ಬೇಕಾಗುತ್ತದೆ ಎಂದು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ಕಷ್ಟವನ್ನು ಆಲಿಸಿದ ಪೊಲೀಸರು ಕೂಡಲೇ ಪತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮಹಿಳೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿದ್ದಾರೆ.
ಸದ್ಯ ಸರ್ಜರಿ ಮಾಡಿ ವೈದ್ಯರು ಹ್ಯಾಂಡಲ್ ಹೊರತೆಗೆದಿದ್ದು, ಪ್ಲಾಸ್ಟಿಕ್ ತುಂಡಿನಿಂದಾಗಿ ಮಹಿಳೆಯ ಗುಪ್ತಾಂಗ, ಸಣ್ಣ ಕರುಳಿಗೆ ಹಾನಿಯುಂಟಾಗಿದೆ ಎಂದು ಹೇಳಿದ್ದಾರೆ.