ಮನೆಯಿಂದಲೇ ಹಸಿ ಕಸ, ಒಣ ಕಸ ವಿಂಗಡಣೆಯಾಗಬೇಕು-ನ್ಯಾ.ಸುಭಾಷ್ ಬಿ.ಆಡಿ

ಬೆಂಗಳೂರು,ಮೇ 14- ನಗರ ಪ್ರದೇಶದ ಕಸವಿಲೇವಾರಿ ಸಮರ್ಪಕವಾಗಿ ನಡೆಯಲು ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಜನರು ಒಟ್ಟಾಗಿ ಕಾರ್ಯ ನಿರ್ವಹಿಸಬೇಕು ಎಂದು ರಾಜ್ಯ ಘನತ್ಯಾಜ್ಯ ನಿಯಂತ್ರಣ ಪ್ರಾಧಿಕಾರದ ಮುಖ್ಯಸ್ಥರಾದ ನ್ಯಾ.ಸುಭಾಷ್ ಬಿ. ಆಡಿ ತಿಳಿಸಿದರು.

ಬಿಬಿಎಂಪಿ ಯಲಹಂಕ ವಲಯ ವತಿಯಿಂದ ಜಿಕೆವಿಕೆ ಆವರಣದಲ್ಲಿ ಆಯೋಜಿಸಿದ್ದ ಘನತ್ಯಾಜ್ಯ ವಿಲೇವಾರಿ ಮತ್ತು ಸಂಸ್ಕರಣೆ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಮನೆಯಿಂದಲೇ ಹಸಿ ಕಸ, ಒಣ ಕಸ ವಿಂಗಡನೆಯಾಗಬೇಕು. ಅದೇ ರೀತಿ ಸಾಗಾಣಿಕೆಯನ್ನು ಪ್ರತ್ಯೇಕವಾಗಿಯೇ ಮಾಡಬೇಕು. ಒಂದು ವೇಳೆ ಮಾಡದಿದ್ದರೆ ದೊಡ್ಡ ಮಟ್ಟದಲ್ಲಿ ದಂಡ ವಿಧಿಸ ಬೇಕಾಗುತ್ತದೆ ಎಂದು ಹೇಳಿದರು.

ಮೂಲದಲ್ಲೇ ಕಸ ವಿಂಗಡನೆ ಮಾಡುವ ಬಗ್ಗೆ ಕಾಯ್ದೆ ಜಾರಿಯಲ್ಲಿದ್ದರೂ ಬೆಂಗಳೂರಿನಲ್ಲಿ ಸಮರ್ಪಕವಾಗಿ ಆಗುತ್ತಿಲ್ಲ. ಬೆಂಗಳೂರಿನಲ್ಲಿ ಸುಮಾರು 5500 ಮೆಟ್ರಿಕ್ ಟನ್ ಘನತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ಸುಮಾರು 1500 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ವೆಚ್ಚ ತಗ್ಗಿಸುವ ಪ್ರಯತ್ನ ಮಾಡಬೇಕಿದೆ ಎಂದು ಹೇಳಿದರು.

ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, ಡಂಪಿಂಗ್‍ಯಾರ್ಡ್ ಸುತ್ತಮುತ್ತಲ ಗ್ರಾಮಗಳ ಅಭಿವೃದ್ದಿಗೆ ಸುಮಾರು 110 ಕೋಟಿ ಹಣ ಒದಗಿಸಲಾಗಿದೆ. ಆದರೆ ಈ ಹಣವನ್ನು ಆಡಳಿತ ಪಕ್ಷದವರ ಕ್ಷೇತ್ರಗಳಲ್ಲಿ ಮಾತ್ರ ಬಳಕೆಯಾಗುತ್ತಿದ್ದು, ಉಳಿದೆಡೆ ಆಗುತ್ತಿಲ್ಲ ಎಂದು ಆರೋಪಿಸಿದರು.

ಕಸ ವಿಂಗಡಣೆಯಲ್ಲಿ ಯಲಹಂಕ ವಲಯ ಹೆಚ್ಚು ಆದ್ಯತೆ ನೀಡಿದ್ದು, ಎಲ್ಲೆಂದರಲ್ಲಿ ಕಸ ಬಿಸಾಡುವವರ ವಿರುದ್ಧ ದಂಡ ಪ್ರಯೋಗ ಮಾಡಬೇಕೆಂದು ಸಲಹೆ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ