ಬೆಂಗಳೂರು, ಮೇ 13-ಜೆಡಿಎಸ್-ಕಾಂಗ್ರೆಸ್‍ನ ಮೈತ್ರಿ ಆರೋಗ್ಯಕರವಾಗಿ ಮುಂದುವರೆಯಬೇಕಾದರೆ ಎರಡೂ ಪಕ್ಷಗಳ ನಾಯಕರು ಬಾಯಿಗೆ ಬಂದಂತೆ ಮಾತನಾಡುವುದನ್ನು ನಿಲ್ಲಿಸಬೇಕೆಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ರಾಜಕೀಯವಾಗಿ ಈವರೆಗೂ ಮೌನವಾಗಿದ್ದ ಎಲ್ಲರೂ ಇದ್ದಕ್ಕಿದ್ದ ಹಾಗೆ ಸ್ಫೋಟಗೊಳ್ಳುತ್ತಿದ್ದು, ಮೈತ್ರಿ ಸರ್ಕಾರದಲ್ಲಿ ಏಟು-ತಿರುಗೇಟಿಗೆ ಎದುರು-ಬದರಾಗಿ ನಿಂತಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್ ಅವರು, ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅವರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರ ಹೇಳಿಕೆಗಳು ಸರಿಯಲ್ಲ. ವಿಶ್ವನಾಥ್-ಸಿದ್ದರಾಮಯ್ಯ ಅವರ ನಡುವೆ ವೈಯಕ್ತಿಕವಾಗಿ ಎಷ್ಟೇ ಸಿಟ್ಟು, ದ್ವೇಷಗಳಿದ್ದರೂ ಅದನ್ನು ಬಹಿರಂಗವಾಗಿ ಹೇಳಿಕೊಂಡು ಮೈತ್ರಿ ಧರ್ಮಕ್ಕೆ ಧಕ್ಕೆ ಉಂಟುಮಾಡಬಾರದು. ವಿಶ್ವನಾಥ್ ಅವರ ಹೇಳಿಕೆಗಳ ಬಗ್ಗೆ ದೇವೇಗೌಡರು ಮತ್ತು ಕುಮಾರಸ್ವಾಮಿಯವರು ಮೌನವಹಿಸಿರುವುದು ನನಗೆ ಆಶ್ಚರ್ಯ ತಂದಿದೆ. ಕೆಲವೊಮ್ಮೆ ಇಂತಹ ಹೇಳಿಕೆಗಳನ್ನು ನಿರ್ಲಕ್ಷಿಸುವುದು ಒಳ್ಳೆಯದೆಂದು ಅನಿಸುತ್ತದೆ.
ಆದರೆ ಮೈತ್ರಿ ಆರೋಗ್ಯಕರವಾಗಿ ಮುಂದುವರೆಯಬೇಕಾದರೆ ಈ ಹೇಳಿಕೆಗಳು ಸಹಾಯಮಾಡುವುದಿಲ್ಲ ಎಂದು ಪರಮೇಶ್ವರ್ ಹೇಳಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷ ಕುಪೇಂದ್ರರೆಡ್ಡಿ ಅವರು, ಮೈತ್ರಿ ಬಗ್ಗೆ ಆಕ್ಷೇಪಾರ್ಹವಾಗಿ ಮಾತನಾಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪರಮೇಶ್ವರ್, ಜೆಡಿಎಸ್-ಕಾಂಗ್ರೆಸ್ ರಾಷ್ಟ್ರಾಧ್ಯಕ್ಷರು ಮತ್ತು ರಾಜ್ಯಾಧ್ಯಕ್ಷರ ನಡುವೆ ಮಾತುಕತೆಯಾಗಿ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ. ಕುಪೇಂದ್ರರೆಡ್ಡಿಯನ್ನು ಕೇಳಿ ಅಲ್ಲ ಎಂದು ತಿರುಗೇಟು ನೀಡಿದ್ದಾರೆ.