ಬೆಂಗಳೂರು, ಮೇ 13-ಬಿಬಿಎಂಪಿ ಸದಸ್ಯರ ನಿಧನದಿಂದ ತೆರವಾಗಿದ್ದ ಎರಡು ವಾರ್ಡ್ಗಳಿಗೆ ಇದೇ 29ರಂದು ಚುನಾವಣೆ ನಡೆಯಲಿದ್ದು, ಮೈತ್ರಿ ಪಕ್ಷದ ಅಭ್ಯರ್ಥಿಗಳಾಗಿ ಪಳನಿಯಮ್ಮ ಹಾಗೂ ಸುಶೀಲಾ ಸುರೇಶ್ ಆಯ್ಕೆಯಾಗಿದ್ದಾರೆ.
ಉಪ ಮೇಯರ್ ರಮೀಳಾ ಶಂಕರ್ ಅವರ ನಿಧನದಿಂದ ತೆರವಾಗಿರುವ ಕಾವೇರಿ ಪುರ ವಾರ್ಡ್ನ್ನು ಜೆಡಿಎಸ್ಗೆ ಬಿಟ್ಟು ಕೊಡಲಾಗಿದ್ದು ಸುಶೀಲಾ ಸುರೇಶ್ ಅವರು ಮೇ 15ರಂದು ನಾಮಪತ್ರ ಸಲ್ಲಿಸಲಿದ್ದಾರೆ.
ಮೈತ್ರಿ ಧರ್ಮದಂತೆ ಸಗಾಯ್ಪುರಂ ವಾರ್ಡ್ ಕಾಂಗ್ರೆಸ್ಗೆ ಬಿಟ್ಟು ಕೊಡಲಾಗಿದ್ದು, ಅಕಾಲಿಕ ನಿಧನ ಹೊಂದಿದ್ದ ಪಕ್ಷೇತರ ಸದಸ್ಯ ಎಳುಮಲೈ ಅವರ ಸಹೋದರಿ ಪಳನಿಯಮ್ಮ ಅವರಿಗೆ ಕೈ ಟಿಕೆಟ್ ನೀಡಲಾಗಿದೆ.
ಮೈತ್ರಿ ಪಕ್ಷದ ಮುಖಂಡರ ಈ ಧೋರಣೆಯಿಂದ ಬೇಸತ್ತಿರುವ ಮಾರಿಮುತ್ತು ಸಗಾಯ್ಪುರಂ ವಾರ್ಡ್ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತೀರ್ಮಾನಿಸಿದ್ದಾರೆ.
ಕಾವೇರಿ ಪುರ ವಾರ್ಡ್ನ ಅಭ್ಯರ್ಥಿ ಆಯ್ಕೆ ಕುರಿತಂತೆ ಇಂದು ಶಾಸಕ ಕೆ.ಗೋಪಾಲಯ್ಯ , ಮಾಜಿ ಶಾಸಕ ಪ್ರಿಯಕೃಷ್ಣ , ಪರಿಷತ್ ಸದಸ್ಯ ಟಿ.ಎ.ಶರವಣ, ಬೆಂಗಳೂರು ನಗರ ಜೆಡಿಎಸ್ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ಮತ್ತಿತರರ ನೇತೃತ್ವದಲ್ಲಿ ಸಭೆ ನಡೆಸಲಾಯಿತು.
ಸಭೆಯಲ್ಲಿ ರಮೀಳಾ ಉಮಾಶಂಕರ್ ಅವರ ಕುಟುಂಬದವರಿಗೆ ಟಿಕೆಟ್ ನೀಡುವ ಬಗ್ಗೆಯೂ ಚರ್ಚಿಸಲಾಯಿತು. ಆದರೆ ಅವರ ಕುಟುಂಬ ವರ್ಗದವರು ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಸುಶೀಲಾ ಸುರೇಶ್ ಅವರನ್ನು ಆಯ್ಕೆ ಮಾಡಲಾಯಿತು ಎಂದು ಆರ್.ಪ್ರಕಾಶ್ ಸುದ್ದಿಗಾರರಿಗೆ ತಿಳಿಸಿದರು.