ಮಹಾರಾಷ್ಟ್ರ ಸರ್ಕಾರದ ಕ್ರಮಕ್ಕೆ ಸಚಿವ ಡಿ.ಕೆ.ಶಿವಕುಮಾರ್ ಅಸಮಾಧಾನ

ಬೆಂಗಳೂರು, ಮೇ 12-ರಾಜ್ಯಕ್ಕೆ ನೀರು ಬಿಡಲು ಮಹಾರಾಷ್ಟ್ರ ಸರ್ಕಾರ ಅನುಸರಿಸುತ್ತಿರುವ ಕ್ರಮಕ್ಕೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ನೀರು ಬಿಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಆದರೆ ಈಗ ನೀರಿಗೆ ಬದಲಾಗಿ, ನೀರನ್ನೇ ವಾಪಸ್ ಕೇಳುತ್ತಿದ್ದು ನಾವು ಎಲ್ಲಿಂದ ನೀರನ್ನು ನೀಡಬೇಕು ಎಂದರು.

ಈ ಬಗ್ಗೆ ಗಂಭೀರವಾಗಿ ಸಮಾಲೋಚನೆ ಮಾಡುತ್ತಿದ್ದು, ತಾಂತ್ರಿಕ ಸಮಿತಿ ಸೂಕ್ತ ತೀರ್ಮಾನ ಕೈಗೊಳ್ಳಬೇಕಾಗಿದೆ. ಮಹಾರಾಷ್ಟ್ರ ಸರ್ಕಾರ ಈ ಹಿಂದೆ ಹಣಪಡೆದು ನೀರು ಬಿಡುತ್ತಿತ್ತು.ಆದರೆ ಈ ಬಾರಿ ನೀರಿಗೆ ಬದಲಾಗಿ ನೀರನ್ನೇ ಕೊಡಿ ಎಂದು ಕೇಳುತ್ತಿದೆ. ರಾಜಕಾರಣ ಏನೇ ಇರಲಿ ರಾಜಕಾರಣಿಗಳು ಮಾತಿಗೆ ಬದ್ಧವಾಗಿರಬೇಕು.

ನೀರು ಪಡೆಯಲು ನಾವು ಮುಂದಾಗಿ ಮಹಾರಾಷ್ಟ್ರ ಸರ್ಕಾರದೊಂದಿಗೆ ಎಂಒಯು ಮಾಡಿಕೊಳ್ಳುತ್ತೇವೆ ಎಂದರು.

ಪೇಪರ್ ಟೈಗರ್ ಅಲ್ಲ:
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿಕೆಗೆ ತಿರುಗೇಟು ನೀಡಿದ ಡಿ.ಕೆ.ಶಿವಕುಮಾರ್, ತಾವು ಪೇಪರ್ ಟೈಗರ್ ಅಲ್ಲ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಎಂದರು.

ಮಾಜಿ ಸಚಿವ ನರೇಂದ್ರಸ್ವಾಮಿ ಅವರು ಮಂಡ್ಯ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ತಟಸ್ಥವಾಗಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಕ್ರಮಕೈಗೊಳ್ಳುವುದು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಿಗೆ ಬಿಟ್ಟ ವಿಚಾರ ಎಂದ ಅವರು, ಮೈತ್ರಿ ಧರ್ಮ ಪಾಲನೆ ಮಾಡಬೇಕೆಂಬುದು ತಮ್ಮ ಸೂಚನೆಯಾಗಿತ್ತು ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ