ನವದೆಹಲಿ: ಲೋಕಸಭಾ ಚುನಾವಣೆಯ 6ನೇ ಹಂತದಲ್ಲಿ 7 ರಾಜ್ಯಗಳ 59 ಕ್ಷೇತ್ರಗಳಿಗೆ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಮತದಾರರು ಉತ್ಸಾಹದಿಂದ ಬಂದು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.
6ನೇ ಹಂತದಲ್ಲಿಉತ್ತರಪ್ರದೇಶ, ಹರಿಯಾಣ, ಬಿಹಾರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ದೆಹಲಿ ಹಾಗೂ ಜಾರ್ಖಂಡ್ನ 979 ಅಭ್ಯರ್ಥಿಗಳು ಮತ ಪರೀಕ್ಷೆ ಎದುರಿಸಲಿದ್ದು, 10.16 ಕೋಟಿ ಮತದಾರರು ಹಕ್ಕು ಚಲಾವಣೆ ಮಾಡಲಿದ್ದಾರೆ.
ಹಿಂದಿ ಹೃದಯ ಭಾಗ ಹಾಗೂ ಪಶ್ಚಿಮ ಬಂಗಾಳದಲ್ಲಿ ಈ ಮತದಾನ ನಡೆಯುತ್ತಿದ್ದು, ಆಡಳಿತಾರೂಢ ಬಿಜೆಪಿಯ ನಿರ್ಣಾಯಕ ಮತಕ್ಷೇತ್ರಗಳನ್ನು ಒಳಗೊಂಡಿದೆ.
ಪಶ್ಚಿಮ ಬಂಗಾಳದಲ್ಲಿ ಕಳೆದ 5 ಹಂತಗಳ ಮತದಾನದ ವೇಳೆ ಹಿಂಸಾಚಾರ ನಡೆದಿದೆ. ಈ ಹಿನ್ನೆಲೆಯಲ್ಲಿ 6ನೇ ಹಂತದಲ್ಲಿ ಮತದಾನ ನಡೆಯುವ ಎಲ್ಲ 15,428 ಮತಗಟ್ಟೆಗಳಲ್ಲಿ ಕೇಂದ್ರ ಅರೆಸೇನಾ ಪಡೆಗಳನ್ನು ಚುನಾವಣಾ ಆಯೋಗ ನಿಯೋಜಿಸಿದೆ. ಆಡಳಿತಾರೂಢ ಟಿಎಂಸಿ ಕಾರ್ಯಕರ್ತರಿಂದ ರಕ್ಷಣೆಗಾಗಿ ಅರೆಸೇನಾ ಪಡೆ ನಿಯೋಜಿಸುವಂತೆ ಬಿಜೆಪಿ ಹಾಗೂ ಎಡಪಕ್ಷಗಳು ಆಯೋಗಕ್ಕೆ ಮನವಿ ಸಲ್ಲಿಸಿದ್ದವು. ಆದರೆ ಅರೆಸೇನಾ ಪಡೆ ನಿಯೋಜನೆಗೆ ಟಿಎಂಸಿ ವಿರೋಧವ್ಯಕ್ತಪಡಿಸಿತ್ತು.
ರಾಷ್ಟ್ರದ ಪ್ರಥಮ ಪ್ರಜೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ರಾಷ್ಟ್ರಪತಿ ಭವನದ ಮತಗಟ್ಟೆಯಲ್ಲಿ ಹಕ್ಕು ಚಲಾವಣೆ ಮಾಡಿದರು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ದೆಹಲಿಯ ಔರಂಗಜೇಬ್ ಲೇನ್ನಲ್ಲಿರುವ ಎನ್ಪಿ ಸಿನಿಯರ್ ಸೆಕೆಂಡರಿ ಸ್ಕೂಲ್ ಮತಗಟ್ಟೆಯಲ್ಲಿ ಮತದಾನ ಮಾಡಿದರು. ದೆಹಲಿಯ ನಿರ್ಮನ್ ಭವನ್ನಲ್ಲಿರುವ ಮತಗಟ್ಟೆಯಲ್ಲಿ ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಮತಚಲಾವಣೆ ಮಾಡಿದರು.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಿವಿಲ್ ಲೈನ್ಸ್ನ ಮತಗಟ್ಟೆಯಲ್ಲಿ ಮತದಾನ ಮಾಡಿದರು. ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಪೂರ್ವ ದೆಹಲಿ ಕ್ಷೇತ್ರದ ಪಾಂಡವ್ ನಗರದ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಪೂರ್ವ ದೆಹಲಿಯ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಆತಿಶಿ ಅವರು ಜಂಗ್ಪುರದ ಕಮಲ್ ನೆಹರು ಸರ್ಕಾರಿ ಸರ್ವೋದಯ ವಿದ್ಯಾಲಯದ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಕರ್ನಾಲ್ನ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು. ದೆಹಲಿಯ ಬಿಜೆಪಿ ಮುಖ್ಯಸ್ಥ ಹಾಗೂ ಈಶಾನ್ಯ ದೆಹಲಿಯ ಅಭ್ಯರ್ಥಿ ಮನೋಜ್ ತಿವಾರಿ ಅವರು ಯಮುನಾ ವಿಹಾರದ ಮತಗಟ್ಟೆ ಸಂಖ್ಯೆ 60ರಲ್ಲಿ ತಮ್ಮ ಹಕ್ಕು ಚಲಾವಣೆ ಮಾಡಿದರು.
ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಔರಂಗಜೇಬ್ ಲೇನ್ನಲ್ಲಿರುವ ಎನ್ಸಿ ಸಿನಿಯರ್ ಸೆಕೆಂಡರಿ ಸ್ಕೂಲ್ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು.
ಮಾಜಿ ರಾಷ್ಟ್ರಪತಿ ಪ್ರಣಾಬ್ ಮುಖರ್ಜಿ ಅವರು ಕೆ.ಕಾಮರಾಜ್ ಲೇನ್ನಲ್ಲಿ ಎನ್ಪಿ ಪ್ರೈಮರಿ ಸ್ಕೂಲ್ನಲ್ಲಿನ ಮತಗಟ್ಟೆಯಲ್ಲಿ ಹಕ್ಕು ಚಲಾವಣೆ ಮಾಡಿದರು.
ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮತದಾನ ಮಾದಿದ್ದಾರೆ. ದೆಹಲಿಯ ಮಾಜಿ ಮುಖ್ಯಮಂತ್ರಿ ಹಾಗೂ ಈಶಾನ್ಯ ದೆಹಲಿಯ ಕಾಂಗ್ರೆಸ್ ಅಭ್ಯರ್ಥಿ ಶೀಲಾ ದೀಕ್ಷಿತ್ ದೆಹಲಿಯ ನಿಜಾಮುದ್ದೀನ್ ಪ್ರದೇಶದ ಮತಗಟ್ಟೆಯಲ್ಲಿ ಹಕ್ಕು ಚಲಾವಣೆ ಮಾಡಿದರು.
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹರಿಯಾಣದ ಗುರುಗ್ರಾಮದ ಪೈನ್ಕ್ರೆಸ್ಟ್ ಸ್ಕೂಲ್ನಲ್ಲಿ ಹಕ್ಕು ಚಲಾವಣೆ ಮಾಡಿದರು. ಪೂರ್ವ ದೆಹಲಿಯ ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ ಅವರು ದೆಹಲಿಯ ಹಳೆಯ ರಾಜಿಂದರ್ ನಗರದ ಮತಗಟ್ಟೆಯಲ್ಲಿ ಮತದಾನ ಮಾಡಿದರು.
ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಅವರು ತಮ್ಮ ಪತ್ನಿ ರೋಮಿ ಹಾಗೂ ಮಗಳು ಅಮಿಯಾ ಅವರೊಂದಿಗೆ ಡಿಪಿಎಸ್ ಮಥುರಾ ರಸ್ತೆಯಲ್ಲಿರುವ ಮತಗಟ್ಟೆಯಲ್ಲಿ ಮತಚಲಾಯಿಸಿದರು.
ಪೂರ್ವ ಉತ್ತರ ಪ್ರದೇಶದ ಕಾಂಗ್ರೆಸ್ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಹಾಗೂ ಪತಿ ರಾಬರ್ಟ್ ವಾದ್ರಾ ಲೂಧಿ ಎಸ್ಟೇಟ್ನಲ್ಲಿರುವ ಸರ್ದಾರ್ ಪಟೇಲ್ ವಿದ್ಯಾಲಯದ ಮತಗಟ್ಟೆಯಲ್ಲಿ ಮತ ಚಲಾವಣೆ ಮಾಡಿದರು.
ಉತ್ತರ ಪ್ರದೇಶದ ಸಚಿವ ಸಿಧಾರ್ಥ್ ನಾಥ್ ಸಿಂಗ್ ಅವರು ಪ್ರಯಾಗ್ರಾಜ್ನ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು.
Lok Sabha election 2019