ಹುಬ್ಬಳ್ಳಿ : ರಾಜಕೀಯ ಕಡುವೈರಿಗಳೆಂದೇ ಬಿಂಬಿತರಾಗಿರುವ ಇಬ್ಬರೂ ನಾಯಕರು ಇಂಡಿಗೋ ವಿಮಾನದಲ್ಲಿ ಬೆಂಗಳೂರಿಗೆ ಹೋಗಲು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮುಖಾ ಮುಖಿಯಾಗಿದ್ದಾರೆ.
ಸಚಿವ ಡಿ.ಕೆ ಶಿವಕುಮಾರ್ ಹಾಗೂ ಶಾಸಕ ಶ್ರೀರಾಮುಲು ಮುಖಾ ಮುಖಿಯಾಗಿದ್ದಾರೆ ಕುಂದಗೋಳ ವಿಧಾನಸಭಾ ಉಪ ಚುನಾವಣೆಗಾಗಿ ಪ್ರಚಾರ ನಡೆಸುತ್ತಿರುವ ಉಭಯ ನಾಯಕರು ತಮ್ಮ ತಮ್ಮ ಪಕ್ಷಗಳ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.
ಬಳ್ಳಾರಿ ಲೋಕಸಭಾ ಚುನಾವಣೆ ವೇಳೆ ಪರಸ್ಪರ ವಾಗ್ದಾಳಿ ನಡೆಸಿದ್ದ ನಾಯಕರು ಇದೀಗ ವಿಧಾನಸಭಾ ಉಪ ಚುನಾವಣೆ ವೇಳೆಯೂ ವಾಕ್ ಸಮರ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇದೆಲ್ಲದರ ಮಧ್ಯೆ ಇಂದು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಶ್ರೀರಾಮುಲು ಮುಖವನ್ನು ನೋಡುತ್ತಿದ್ದಂತೆ ಸಚಿವ ಡಿ.ಕೆ ಶಿವಕುಮಾರ್ ಅವರ ಕೈಹಿಡಿದು ಸ್ಮೈಲ್ ಕೊಟ್ಟಿದ್ದಾರೆ, ಬಳಿಕ ಅಕ್ಕ ಪಕ್ಕದಲ್ಲೇ ಕುಳಿತು ಕೆಲ ಹೊತ್ತು ಹರಟೆ ಹೊಡೆದಿದ್ದಾರೆ ಎನ್ನಲಾಗಿದೆ.
ಶ್ರೀರಾಮುಲುಗೆ ಎಚ್ಚರಿಕೆ ಕೊಟ್ಟಿದ್ದ ಡಿಕೆ ಶಿವಕುಮಾರ್
ಶಾಸಕ ಶಿವಳ್ಳಿ ಸಾವಿಗೆ ಮೈತ್ರಿ ಸರ್ಕಾರ ಕಿರುಕುಳವೇ ಕಾರಣ ಎಂದು ಕುಂದಗೋಳ ವಿಧಾಸಭಾ ಉಪಚುನಾವಣೆ ಪ್ರಚಾರದ ವೇಳೆ ಗಂಭೀರ ಆರೋಪ ಮಾಡಿದ್ದ ಮಾಜಿ ಸಚಿವ ಬಿ.ಶ್ರೀರಾಮುಲು ವಿರುದ್ಧ ದೂರು ದಾಖಲಿಸಲು ಮುಂದಾಗಿರುವುದಾಗಿ ಸಚಿವ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದರು. ಈ ಹಿಂದೆ ಕುಮಾರಸ್ವಾಮಿ ಮೇಲೂ ಆರೋಪ ಮಾಡಿದ್ದರು. ಸಿಎಂ ಕುಮಾರಸ್ವಾಮಿ ಅವರು ಸುಮ್ಮನಿರಬಹುದು ಆದರೆ ನಾನು ಸುಮ್ಮನಿರಲ್ಲ ಎಂದು ಶಾಸಕ ಶ್ರೀರಾಮುಲುಗೆ ಸಚಿವ ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದರು.
ಶ್ರೀರಾಮುಲು ಅಣ್ಣನವರ ಬಗ್ಗೆ ನಮಗೆ ಅಪಾರ ಗೌರವವಿದೆ. ಅವರು ಆಧಾರ ರಹಿತ ಆರೋಪ ಮಾಡಬಾರದು. ನನ್ನ ಬಗ್ಗೆ ನೂರು ಮಾತಾಡಲಿ ಅದು ಬೇರೆ ವಿಚಾರ. ಸಾವಿಗೆ ಸರ್ಕಾರ, ಪಕ್ಷ ಕಾರಣ ಎನ್ನುವುದನ್ನು ಅರಗಿಸಿಕೊಳ್ಳಲ್ಲ. ಸಚಿವರಾಗಿದ್ದವರು ಈ ರೀತಿ ಬೇಜವಾಬ್ದಾರಿ ಹೇಳಿಕೆ ನೀಡಬಾರದು ಎಂದು ಗುಡುಗಿದ್ದರು ಎನ್ನಲಾಗಿದೆ.