ಹುಬ್ಬಳ್ಳಿ: ಲೋಕಸಭೆ ಚುನಾವಣೆ ಫಲಿತಾಂಶದ ನಂತರ ರಾಜ್ಯದ ರಾಜಕೀಯ ಭವಿಷ್ಯ ನಿರ್ಧಾರವಾಗಲಿರುವುದು ಖಚಿತ ಅಲ್ಲಿಯವರೆಗೆ ಯಾವುದೇ ವಿವಾದ ಚರ್ಚೆಗಳಿಗೆ ಆಸ್ಪದ ನೀಡದೆ ತೆಪ್ಪಗಿರುವಂತೆ ಮಾಜಿ ಸಿಎಂ ಯಡಿಯೂರಪ್ಪನವರಿಗೆ ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಸ್ವಾಮಿಜಿ ಸೂಚನೆ ನೀಡಿದ್ದಾರೆ.
ರಂಭಾಪುರಿ ಶ್ರೀಗಳು ಇಂದು ಹುಬ್ಬಳ್ಳಿಯಲ್ಲಿರುವ ರಂಭಾಪುರಿ ಭವನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರೂ ಸಹ ಭವನಕ್ಕೆ ಭೇಟಿ ನೀಡಿ ಶ್ರೀಗಳ ಆರ್ಶೀರ್ವಾದ ಪಡೆದಿದ್ದಾರೆ. ಈ ವೇಳೆ “ಲೋಕಸಭೆ ಚುನಾವಣಾ ಫಲಿತಾಂಶದ ನಂತರ ರಾಜ್ಯ ರಾಜಕೀಯ ಚಿತ್ರಣ ಬದಲಾಗಲಿದೆ ಅಲ್ಲಿಯವರೆಗೆ ಯಾವ ನಾಯಕರು ಯಾವುದೇ ಹೇಳಿಕೆ ನೀಡಿ ವಿವಾದಗಳಿಗೆ ಆಸ್ಪದ ನೀಡದೆ ತೆಪ್ಪಗಿರುವುದು ಒಳಿತು” ಎಂದು ಮಾಜಿ ಸಿಎಂಗೆ ಸೂಚನೆ ನೀಡಿದ ಶ್ರೀಗಳು “ನರೇಂದ್ರ ಮೋದಿ ಇನ್ನೊಂದು ಅವಧಿಗೆ ಪ್ರಧಾನಿಯಾಗಲಿ” ಎಂದು ತಮ್ಮ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ಕುಂದಗೋಳ, ಚಿಂಚೋಳಿ ಉಪ ಚುನಾವಣೆ ಬಗ್ಗೆ ಮಾತನಾಡಿರುವ ಅವರು, “ಈ ಎರಡೂ ಕ್ಷೇತ್ರಗಳಲ್ಲಿ ಮತದಾರರು ಒಳ್ಳೆಯವರನ್ನು ಆಯ್ಕೆ ಮಾಡಬೇಕು. ಜಾತ್ಯಾತೀತವಾಗಿ ಎಲ್ಲಾ ವರ್ಗದ ಜನರ ಸಮಸ್ಯೆಗಳನ್ನು ಬಗೆಹರಿಸುವವರನ್ನು ಆಯ್ಕೆ ಮಾಡಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಸ್ವಾಮಿಜಿಯವರ ಭೇಟಿ ರಾಜ್ಯ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಧರ್ಮ ಒಡೆದವರು ಪ್ರತಿಫಲ ಅನುಭವಿಸಿದ್ದಾರೆ : ವೀರಶೈವ ಲಿಂಗಾಯತ ಧರ್ಮ ಹೋರಾಟ ವಿಚಾರವನ್ನು ಉಲ್ಲೇಖಿಸಿ ಮಾತನಾಡಿದ ಶ್ರೀಗಳು, “ರಾಜಕೀಯ ಹಿತಾಸಕ್ತಿಗಾಗಿ ಧರ್ಮವನ್ನು ಎಳೆದುತರಬಾರದು. ವೀರಶೈವ ಲಿಂಗಾಯತ ಎರಡೂ ಒಂದೇ ಅನ್ಯಭಾವ ಹುಡುಕುವುದು ಸರಿಯಲ್ಲ. ಹೀಗೆ ಅನ್ಯಭಾವ ಹುಡುಕಿ ಧರ್ಮ ಒಡೆದವರು ಅದರ ಪ್ರತಿಫಲ ಅನುಭವಿಸಿದ್ದಾರೆ” ಎಂದಿದ್ದಾರೆ.
“ಕಾಂಗ್ರೆಸ್ ನಾಯಕ ವಿನಯ ಕುಲಕರ್ಣಿ ತಲೆಬಾಗಿ ಬಂದರು ಅವರಿಗೆ ಆಶೀರ್ವಾದ ಮಾಡಿದ್ದೇನೆ. ವೀರಶೈವ ಲಿಂಗಾಯತ ಧರ್ಮ ಒಡೆಯಲು ಪ್ರಯತ್ನಿಸಿದ ಕೆಲವರಿಗೆ ತಮ್ಮ ತಪ್ಪಿನ ಅರಿವಾಗಿದೆ. ಆದರೆ, ಇನ್ನೂ ಕೆಲವರು ತಮ್ಮ ತಪ್ಪನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಜನ ಇಂತವರಿಗೆ ಬೆಲೆ ಕೊಡಲ್ಲ” ಎಂದು ಅವರು ತಿಳಿಸಿದ್ದಾರೆ.