![v ssomanna](http://kannada.vartamitra.com/wp-content/uploads/2018/04/v-ssomanna-288x381.jpg)
ಚಿಂಚೋಳಿ, ಮೇ 11-ಉಮೇಶ್ ಜಾಧವ್ ಅವರು ಹಣಕ್ಕಾಗಿ ಮಾರಾಟವಾಗಿದ್ದಾರೆ ಎನ್ನುವ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತ್ಯುತ್ತರ ನೀಡಿರುವ ಮಾಜಿ ಸಚಿವ ವಿ ಸೋಮಣ್ಣ, ರಾಜೀನಾಮೆ ಅಂಗೀಕಾರದ ಸಮಯದಲ್ಲೇ ಸಭಾಪತಿಗಳು ಕ್ಲೀನ್ ಚೀಟ್ ನೀಡಿರುವುದು ನಿಮ್ಮ ಗಮನಕ್ಕೆ ಬಂದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯು ದಿನ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಇಂದು ಮಾಜಿ ಸಚಿವ ವಿ ಸೋಮಣ್ಣ ಹಾಗೂ ಕ್ಷೇತ್ರದ ಉಸ್ತುವಾರಿ ಎನ್ ರವಿ ಕುಮಾರ್, ಮಾಜಿ ಶಾಸಕ ಉಮೇಶ್ ಜಾಧವ್ ಹಾಗೂ ಬಾಬುರಾವ್ ಚಿಂಚನಸೂರ್ ಜೊತೆಗೂಡಿ ಭರ್ಜರಿ ಪ್ರಚಾರ ನಡೆಸಿದರು.
ಚಿಂಚೋಳಿಯ ಹರಕೂಡ ಮಠದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ವಿ ಸೋಮಣ್ಣ, ಸಿದ್ದರಾಮಯ್ಯ ಮತ್ತು ಖರ್ಗೆ ವಿರುದ್ದ ವಾಗ್ದಾಳಿ ನಡೆಸಿದರು. ನನ್ನ ರಾಜಕೀಯ ಜೀವನದಲ್ಲಿ ಇದು 16 ನೇ ಉಪಚುನಾವಣೆ. ಇಲ್ಲಿ ನಡೆಯುತ್ತಿರುವ ಉಪಚುನಾವಣೆ ಸ್ವಾಭಿಮಾನದ ಉಪಚುನಾವಣೆ. ಇಂತಹ ಸ್ವಾಭಿಮಾನದ ಚುನಾವಣೆಯನ್ನು ಇದುವರೆಗೂ ಎಲ್ಲಿಯೂ ನೋಡಿಲ್ಲ ಎಂದರು.
ಸಮ್ಮಿಶ್ರ ಸರಕಾರಕ್ಕೆ ಭಯ ಹುಟ್ಟಿಕೊಂಡಿದ್ದು, ಕಾಂಗ್ರೆಸ್ ನ ಎಲ್ಲಾ ಸಚಿವರಗಳೂ ಕೂಡಾ ಇಲ್ಲೇ ಬೀಡು ಬಿಟ್ಟಿದ್ದಾರೆ. ಇಡಿ ಕರ್ನಾಟಕ ಸರಕಾರ ಚಿಂಚೋಳಿಗೆ ಬಂದಿದ್ದು, ಅವರಿಗೆ ಸೋಲಿನ ಭೀತಿ ಉಂಟಾಗಿರುವುದರಿಂದ ಈ ರೀತಿ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಳೆದ 11 ತಿಂಗಳಿನಲ್ಲಿ ಚಿಂಚೋಳಿ ಕ್ಷೇತ್ರಕ್ಕೆ ಮಾಡಿರುವ ಅಭಿವೃದ್ದಿ ಕೆಲಸಗಳೇನು, ಖರ್ಗೆ ಅವರು ಮಾಡಿರುವ ಅಭಿವೃದ್ದಿಗಳೇನು ಎನ್ನುವುದನ್ನು ಪ್ರಸ್ತಾಪ ಮಾಡದೇ ಎಲ್ಲರೂ ಉಮೇಶ್ ಜಾಧವ್ ಅವರ ನಾಮಸ್ಮರಣೆ ಮಾಡುತ್ತಿದ್ದಾರೆ.ಅಭಿವೃದ್ಧಿ ಕೆಲಸಗಳನ್ನೇ ಕೈಗೊಳ್ಳದೇ ಇರುವುದರಿಂದ ಅದರ ಬಗ್ಗೆ ಚಕಾರ ಎತ್ತಲು ಕಾಂಗ್ರೆಸ್ ನಾಯಕರುಗಳಿಗೆ ಸಾಧ್ಯವಿಲ್ಲ ಎಂದು ಹರಿಹಾಯ್ದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರೇ ಖುದ್ದಾಗಿ ಉಮೇಶ್ ಜಾಧವ್ ಅವರ ರಾಜೀನಾಮೆ ಅಂಗೀಕರಿಸುವ ಮುನ್ನ ಆಮಿಷಗಳಿಗೆ ಒಳಗಾಗಿರುವ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸುವಂತೆ ಸಭಾಪತಿಗಳಾದ ರಮೇಶ್ ಕುಮಾರ್ ಅವರಿಗೆ ದೂರು ನೀಡಿದ್ದರು. ಸುಮಾರು 26 ದಿನಗಳ ಕಾಲ ರಾಜೀನಾಮೆಯನ್ನು ಅಂಗೀಕರಿಸುವ ಬಗ್ಗೆ ಪೊಲೀಸ್ ಅಧಿಕಾರಿಗಳು ಹಾಗೆಯೇ ಹಲವಾರು ಸಂಘಟನೆಗಳ ಪ್ರತಿನಿಧಿಗಳಿಂದ ಮಾಹಿತಿಯನ್ನು ಪಡೆದ ಸಭಾಪತಿಗಳು ಕೊನೆಗೆ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ರಾಜೀನಾಮೆ ಅಂಗೀಕಾರದ ಸಮಯದಲ್ಲಿ ಉಮೇಶ್ ಜಾಧವ್ ಯಾವುದೇ ಆಸೆ, ಆಮಿಷಗಳಿಗೆ ಒಳಗಾಗಿಲ್ಲಾ ಎನ್ನುವುದನ್ನೂ ಸ್ಪಷ್ಟಪಡಿಸಿದ್ದಾರೆ. ಅವರ ಪಕ್ಷದ ಸಭಾಪತಿಗಳೇ ಕ್ಲೀನ್ ಚಿಟ್ ನೀಡಿರುವಾಗ, ಈ ನಾಯಕರ ಹೇಳಿಕೆಗೆ ಎಲ್ಲಿದೆ ನೈತಿಕತೆ ಎಂದು ಪ್ರಶ್ನಿಸಿದರು.
ಆಸೆ ಆಮಿಷಗಳಿಗೆ ಒಳಗಾಗಿ ರಾಜೀನಾಮೆ ನೀಡಿದ್ದಾರೆ ಎನ್ನುವ ನಾಯಕರ ಹೇಳಿಕೆಗೆ ಸಭಾಪತಿಗಳಾದ ರಮೇಶ್ ಕುಮಾರ್ ಅವರೇ ಉತ್ತರ ನೀಡಿದ್ದಾರೆ ಎಂದರು.
ಮಾಜಿ ಶಾಸಕ ಉಮೇಶ್ ಜಾಧವ್ ಮಾತನಾಡಿ, ಕಾಂಗ್ರೆಸ್ ನವರಿಗೆ ಸೋಲಿನ ಭಯ ಶುರುವಾಗಿದೆ. ಹೀಗಾಗಿ ನಮ್ಮ ವಿರುದ್ದ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಸಿದ್ದರಾಮಯ್ಯ ಕೂಡಾ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದನ್ನು ಮರೆತಿದ್ದಾರೆ ಎನ್ನಿಸುತ್ತದೆ. ನಮ್ಮ ಕುಟುಂಬಸ್ಥರಿಗೆ ಟಿಕೆಟ್ ಕೊಟ್ಟಿದ್ದೀವಿ ಎಂದು ಬಡಾಯಿ ಕೊಚ್ಚಿಕೊಳ್ಳುವ ಕಾಂಗ್ರೆಸ್ ನಾಯಕರು, ಅವರನ್ನು ಸೋಲಿಸಿದ್ದು ಯಾರು ಎನ್ನುವುದಕ್ಕೂ ಉತ್ತರ ನೀಡಲಿ. ನನಗೂ ಟಿಕೆಟ್ ಕೊಟ್ಟು ಸೋಲಿಸಲು ಖರ್ಗೇ ಪ್ರಯತ್ನಸಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ನವರು ಸುಳ್ಳು ಹೇಳುತ್ತಿದ್ದಾರೆ. ನನಗಲ್ಲ ನನ್ನ ಕ್ಷೇತ್ರದ ಜನರಿಗೆ ಚುಚ್ಚಿದ ಮುಳ್ಳು ತಗೆಯಬೇಕಾಗಿದೆ.ಸ್ಪೀಕರ್ ರಮೇಶ್ ಕುಮಾರ್ ಕ್ಲೀನ್ ಚಿಟ್ ಕೊಟ್ಟರೂ, ಕಾಂಗ್ರೆಸ್ ನವರು ಹಣಕ್ಕೆ ಮಾರಾಟವಾಗಿದ್ದೇನೆ ಎನ್ನುತ್ತಾರೆ. ಅವರ ಸ್ಪೀಕರ್ ಮೇಲೆ ಅವರಿಗೆ ನಂಬಿಕೆ ಇಲ್ಲವೇ. ಇದೆಲ್ಲದಕ್ಕೂ ಮೇ 23 ರಂದು ಉತ್ತರ ನೀಡುತ್ತೇವೆ ಎಂದರು.
ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಮಾತನಾಡಿ, ಸಿದ್ದರಾಮಯ್ಯ ಅವರಿಗೆ ದೇವೇಗೌಡ ಅವರು ದೇಶದಲ್ಲಿಯೇ ಕೆಟ್ಟ ಸಿಎಂ ಎಂದು ಹೇಳಿದ್ದಾರೆ.ನಾನು 5 ಬಾರಿ ಗೆದ್ದಿದ್ದೇನೆ ಅದಕ್ಕಾಗಿಯೇ ನನಗೆ ಸಚಿವ ಸ್ಥಾನ ಕೊಟ್ಟಿದ್ದಾರೆ.ಇವರೇನು ಮನೆಯಿಂದ ಕೊಟ್ಟರಾ ಎಂದು ಪ್ರಶ್ನಿಸಿದರು.ಚುನಾವಣೆ ಸಮಯದಲ್ಲಿ ಅವರಿಗೆ ಕೋಲಿ ಸಮುದಾಯ ನೆನಪಾಗಿದೆ.ಚುನಾವಣೆ ಸಮಯದಲ್ಲಿ ಓಟಿನ ವ್ಯಾಪಾರಕ್ಕಾಗಿ ನೆನೆಪು ಮಾಡಿಕೊಳ್ಳುತ್ತಾರೆ.ಸಿದ್ದರಾಮಯ್ಯ ಅವರ ತಂಡ ಸರಕಾರ ಕೆಡವಲು ಸ್ಕೆಚ್ ಹಾಕಿ ಕುಳಿತಿದೆ.ಸಿದ್ದರಾಮಯ್ಯ ಅವರೇ ಜೆಡಿಎಸ್ ಪಕ್ಷಕ್ಕೆ ದ್ರೋಹ ಮಾಡಿ ಹೆತ್ತ ತಾಯಿಗೆ ಅನ್ಯಾಯ ಮಾಡಿದ್ದಾರೆ.ಫಲಿತಾಂಶದ ನಂತರ ಯಾರು ಪೈಲ್ವಾನರು ಎಂದು ಗೊತ್ತಾಗುತ್ತದೆ.23 ರ ಫಲಿತಾಂಶದ ಅಖಾಡದಲ್ಲಿ ನಾನೇ ಪೈಲ್ವಾನ್ ಆಗಿ ಗೆಲ್ಲಲಿದ್ದೇನೆ ಎಂದರು.