ಕೊಡಗು: ಕೆಲ ದಿನಗಳಿಂದ ಆರೋಗ್ಯ ಸಮಸ್ಯೆಗೆ ಒಳಗಾಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಇದೀಗ ವಿಶ್ರಾಂತಿಗಾಗಿ ಕುಟುಂಬ ಸಮೇತರಾಗಿ ಕೊಡಗಿಗೆ ತೆರಳಿದ್ದಾರೆ. ಕೊಡಗಿನ ಇಬ್ಬನಿ ರೆಸಾರ್ಟ್ನಲ್ಲಿ ಶುಕ್ರವಾರ ರಾತ್ರಿಯಿಂದ ಮೂರು ದಿನ ರೂಮ್ ಬುಕ್ ಮಾಡಲಾಗಿದೆ. ಆದರೆ ಈ ರೆಸಾರ್ಟ್ಗೆ ಆಗಮಿಸಿರುವ ಕುಮಾರಸ್ವಾಮಿ ತೆಗೆದುಕೊಂಡಿರುವ ಆ ಒಂದು ತೀರ್ಮಾನ ಸಿಎಂಗೆ ಕನ್ನಡಿಗರ ಮೇಲೆ ವಿಶ್ವಾಸವಿಲ್ಲವೆ..? ಎಂಬ ಅನುಮಾನಕ್ಕೆ ಕಾರಣವಾಗಿದೆ.
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಹಗಲಿರುಲೆನ್ನದೇ ಉರಿಬಿಸಿಲಿನಲ್ಲಿ ಪ್ರಚಾರ ಮಾಡಿ ದಣಿದಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಕೆಲ ದಿನಗಳಿಂದ ಆರೋಗ್ಯ ಸಮಸ್ಯೆಗೆ ಒಳಗಾಗಿದ್ದಾರೆ. ಇದೇ ಕಾರಣಕ್ಕೆ ಕಳೆದ ವಾರ ಉಡುಪಿಯ ಕಾಪು ಮುಳೂರು ಸಮೀಪದ ಸಾಯಿರಾಧ ಹೆಲ್ತ್ ರೆಸಾರ್ಟ್ನಲ್ಲಿ ವಿಶ್ರಾಂತಿ ತೆರಳಿದ್ದ ಅವರು ಪಂಚಕರ್ಮ ಚಿಕಿತ್ಸೆಯನ್ನೂ ಪಡೆದಿದ್ದರು.
ಇದೀಗ ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಮಗ ನಿಖಿಲ್ ಜೊತೆಗೆ ಕೊಡಗಿಗೆ ತೆರಳಿದ್ದಾರೆ. ಆದರೆ, ಸಿಎಂ ರೆಸಾರ್ಟ್ಗೆ ಬರುತ್ತಿದ್ದಂತೆ ಸ್ಥಳೀಯ ಕನ್ನಡ ಸಿಬ್ಬಂದಿಗಳನ್ನು ಮನೆಗೆ ಕಳಿಸಿ ಆ ಜಾಗಕ್ಕೆ ಉತ್ತರ ಭಾರತೀಯ ಸಿಬ್ಬಂದಿಗಳನ್ನು ನಿಯೋಜಿಸಿರುವುದು ಸ್ಥಳೀಯ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಮುಖ್ಯಮಂತ್ರಿಗಳೆ ಕನ್ನಡಿಗರ ಮೇಲೆ ಏಕಿಲ್ಲ ವಿಶ್ವಾಸ..? : ಸಿಎಂ ಕುಮಾರಸ್ವಾಮಿ ಕೊಡಗಿನಲ್ಲಿ ವಿಶ್ರಾಂತಿ ಪಡೆಯಲು ನಿಶ್ಚಯಿಸಿದ ತಕ್ಷಣ ಕೊಡಗಿನ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಇಲ್ಲಿನ ಇಬ್ಬನಿ ರೆಸಾರ್ಟ್ನಲ್ಲಿ ಐದು ಕೊಠಡಿಗಳನ್ನು ಬುಕ್ ಮಾಡಿದ್ದಾರೆ. ಅವರೂ ಸಹ ಸಿಎಂ ಜೊತೆಯೇ ವಾಸ್ತವ್ಯ ಹೂಡಿದ್ದಾರೆ.
ಇಡೀ ರಾಜ್ಯ ತೀವ್ರ ಬರದಿಂದ ತತ್ತರಿಸುತ್ತಿರುವಾಗ ಜನರ ಸಮಸ್ಯೆಗೆ ಸ್ಪಂದಿಸಬೇಕಾಗಿದ್ದ ಸಿಎಂ ಹೀಗೆ ವಿಶ್ರಾಂತಿ ನೆಪದಲ್ಲಿ ಕಳೆದ ಕೆಲ ದಿನಗಳಿಂದ ರೆಸಾರ್ಟ್ನಲ್ಲೆ ಕಾಲ ಕಳೆಯುತ್ತಿರುವುದು ರಾಜ್ಯ ರಾಜಕೀಯ ಪಡಸಾಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಆದರೂ ಸಿಎಂ ಈ ಟೀಕೆಗಳನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ, ಈಗ ಅವರ ಈ ಒಂದು ತೀರ್ಮಾನ ಕನ್ನಡಿಗರನ್ನು ಕೆರಳಿಸಿರುವುದು ಮಾತ್ರ ಸುಳ್ಳಲ್ಲ.
ಸಿಎಂ ಪ್ರೊಟೋಕಾಲ್ ಅನ್ವಯ ಅವರ ಭದ್ರತೆಯ ಕಾರಣಕ್ಕೆ ಮುಖ್ಯಮಂತ್ರಿ ವಿಶ್ರಾಂತಿ ಪಡೆಯುವ ಜಾಗದಲ್ಲಿ ಯಾರೂ ಮೊಬೈಲ್ ಬಳಸುವಂತಿಲ್ಲ, ಅನುಮತಿ ಇಲ್ಲದೆ ಹೊರಗಿನವರು ರೆಸಾರ್ಟ್ ಪ್ರವೇಶಿಸುವಂತಿಲ್ಲ. ಹೀಗೆ ನಾನಾ ನಿಯಮಗಳಿವೆ. ಆದರೆ, ಯಾವ ಪ್ರೊಟೋಕಾಲ್ನಲ್ಲೂ ಸಿಎಂ ಉಳಿದುಕೊಂಡಿರುವ ಜಾಗದಲ್ಲಿ ಕನ್ನಡಿಗರು ಇರಬಾರದು ಎಂದಿಲ್ಲ. ಆದರೆ, ಸಿಎಂ ಕೊಡಗಿನಲ್ಲಿ ಕನ್ನಡಿಗರನ್ನೂ ದೂರವಿಡುವ ನಿಯಮವನ್ನು ಪಾಲಿಸಲು ಮುಂದಾಗಿರುವುದು ವಿಪರ್ಯಾಸವೆ ಸರಿ.
ಕುಮಾರಸ್ವಾಮಿ ಇಬ್ಬನಿ ರೆಸಾರ್ಟ್ಗೆ ಆಗಮಿಸುತ್ತಿದ್ದಂತೆ ಇಲ್ಲಿನ ಕೊಠಡಿಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಸುಮಾರು 8 ಜನ ಕನ್ನಡಿಗ ಸಿಬ್ಬಂದಿಗಳಿಗೆ ರಜೆ ನೀಡಿ ಮನೆಗೆ ಕಳುಹಿಸಲಾಗಿದೆ. ಅಲ್ಲದೆ ಅವರ ಜಾಗಕ್ಕೆ ಮೂರು ದಿನಗಳ ಮಟ್ಟಿಗೆ ಉತ್ತರ ಭಾರತದ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಇದು ಎಷ್ಟರ ಮಟ್ಟಿಗೆ ಸರಿ..? ಈ ಮೂರು ದಿನ ಕನ್ನಡಿಗರು ರೆಸಾರ್ಟ್ನಲ್ಲಿದ್ದರೆ ಏನಾಗುತ್ತೆ..? ಹಾಗಾದ್ರೆ ಸಿಎಂ ಕುಮಾರಸ್ವಾಮಿಗೆ ಕನ್ನಡಿಗರ ಮೇಲೆ ನಂಬಿಕೆ ಇಲ್ಲವೇ…? ಎಂಬ ಸಾಲು ಸಾಲು ಪ್ರಶ್ನೆಗಳು ಇದೀಗ ಭುಗಿಲೆದ್ದಿದೆ. ಅಲ್ಲದೆ ಇದು ಕನ್ನಡಿಗರ ಆಕ್ರೋಶಕ್ಕೂ ಕಾರಣವಾಗಿದೆ.