ಬೆಂಗಳೂರು, ಮೇ 11- ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ರಾಜ್ಯ ರಾಜಕಾರಣದಲ್ಲಿ ಹಠಾತ್ ಬದಲಾವಣೆಯಾಗುವ ಸಾಧ್ಯತೆ ಇದೆಯೇ? ಕಾಂಗ್ರೆಸ್ಗೆ ಕೈ ಕೊಟ್ಟು ದಳಪತಿಗಳು ಹೊಸ ರಾಜಕೀಯ ಲೆಕ್ಕಾಚಾರ ಹಾಕಿದ್ದಾರೆಯೇ?
ಕಳೆದ ಎರಡು ವಾರದಿಂದ ದೋಸ್ತಿ ಸರ್ಕಾರದಲ್ಲಿ ನಡೆಯುತ್ತಿರುವ ಕ್ಷಿಪ್ರ ಬೆಳವಣಿಗೆಗಳನ್ನು ಗಮನಿಸಿದರೆ ಕರ್ನಾಟಕದಲ್ಲಿ ಮತ್ತೆ 2006ರ ಬೆಳವಣಿಗೆ ನಡೆದರೂ ಅಚ್ಚರಿ ಇಲ್ಲ ಎನ್ನುತ್ತಿವೆ ಸರ್ಕಾರದ ಮೂಲಗಳು.
ಕಾಂಗ್ರೆಸ್ ನಾಯಕರ ನಡವಳಿಕೆಗಳು, ಸಚಿವರ ಬಹಿರಂಗ ಹೇಳಿಕೆಗಳು, ಸರ್ಕಾರದ ವಿರುದ್ದವೇ ಗುಟುರು ಹಾಕುತ್ತಿರುವ ಮುಖಂಡರು ಈ ಎಲ್ಲ ಬೆಳವಣಿಗೆಗಳಿಂದ ಬೇಸತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ 23ರ ಫಲಿತಾಂಶದವರೆಗೂ ಮೌನಕ್ಕೆ ಶರಣಾಗಲಿದ್ದಾರೆ.
ಫಲಿತಾಂಶ ಪ್ರಕಟಗೊಂಡ ಬಳಿಕ ಹಾಸನ, ಮಂಡ್ಯ, ತುಮಕೂರು ಕ್ಷೇತ್ರಗಳಲ್ಲಿ ಅಪ್ಪಿತಪ್ಪಿಯೂ ಜೆಡಿಎಸ್ ಪರಾಭವಗೊಂಡರೆ ದೋಸ್ತಿ ಸರ್ಕಾರಕ್ಕೆ ವಿಚ್ಛೇದನ ನೀಡುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ.
ಹೀಗಾಗಿಯೇ ಕಳೆದ ಎರಡು ದಿನಗಳಿಂದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ ಸೇರಿದಂತೆ ಪ್ರಮುಖ ನಾಯಕರು ಕಾಂಗ್ರೆಸ್ನ ಹೇಳಿಕೆಗಳ ಬಗ್ಗೆ ತುಟಿಕ್ಪಿಟಿಕ್ ಎನ್ನುತ್ತಿಲ್ಲ.
ಕೇವಲ 2ನೇ ಹಂತದ ನಾಯಕರು ಅಂದರೆ ಸಚಿವರು ಹಾಗೂ ಕೆಲವರು ಮಾತ್ರ ಪರೋಕ್ಷವಾಗಿ ಕಾಂಗ್ರೆಸ್ಗೆ ಠಕ್ಕರ್ ನೀಡುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ನ ಪ್ರತಿಯೊಂದು ಬೆಳವಣಿಗೆಗಳನ್ನು ಕುಮಾರಸ್ವಾಮಿ ಮತ್ತು ದೇವೇಗೌಡರು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸರಿಯಾದ ಕಾಲದಲ್ಲಿ ಸೂಕ್ತವಾದ ನಿರ್ಧಾರವನ್ನು ಪ್ರಕಟಿಸಲು ಕಸರತ್ತು ನಡೆಸುತ್ತಿದ್ದಾರೆ.
ಮರಳುವುದೇ ಕ್ಷಿಪ್ರ ರಾಜಕೀಯ:
ಈ ಹಿಂದೆ ರಾಜ್ಯದಲ್ಲಿ 2006ರ ವೇಳೆ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರವಿತ್ತು. ಅಂದು ಮುಖ್ಯಮಂತ್ರಿಯಾಗಿ ಧರಂಸಿಂಗ್ ಇದ್ದರೆ, ಉಪಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಜೆಡಿಎಸ್ ಸಾರಥಿಯಾಗಿದ್ದರು.
ಇಂದು ಯಾವ ಪರಿಸ್ಥಿತಿ ಇತ್ತೋ ಅದೇ ಪರಿಸ್ಥಿತಿ ಅಂದು ಕೂಡ ಇತ್ತು. ಸರ್ಕಾರದಲ್ಲಿ ಜೆಡಿಎಸ್ ಶಾಸಕರ ಕೆಲಸಗಳು ನಡೆಯುತ್ತಿಲ್ಲ ಎಂಬ ಅಳಲು ಒಂದುಕಡೆಯಾದರೆ ಕಾಂಗ್ರೆಸಿಗರು ಒಳಗೊಳಗೆ ತೆನೆಹೊತ್ತ ಮಹಿಳೆಯ ಪಕ್ಷಕ್ಕೆ ಖೆಡ್ಡಾ ತೋಡುತ್ತಿದ್ದಾರೆ ಎಂಬ ಅನುಮಾನ ಬಂದಿತ್ತು.
ಹೀಗಾಗಿಯೇ ಅಂದು ಕುಮಾರಸ್ವಾಮಿ ತಮ್ಮ ತಂದೆಗೆ ವಿರುದ್ಧವಾಗಿ ವ್ಯತಿರಿಕ್ತವಾದ ಹಾಗೂ ಯಾರೂ ಊಹಿಸಲು ಅಸಾಧ್ಯವಾದ ತೀರ್ಮಾನವನ್ನು ಕೈಗೊಂಡಿದ್ದು ಇತಿಹಾಸ.
ಇದೀಗ ಕಾಂಗ್ರೆಸ್-ಜೆಡಿಎಸ್ ಅಧಿಕಾರದಲ್ಲಿ ಅಧಿಕಾರ ನಡೆಸುತ್ತಿದ್ದರೂ ಸಂಬಂಧಗಳು ಮಾತ್ರ ದಿನದಿಂದ ದಿನಕ್ಕೆ ಹಳಸುತ್ತಲೇ ಇವೆ. 28 ಲೋಕಸಭಾ ಕ್ಷೇತ್ರಗಳಲ್ಲಿ ಅನೇಕ ಕಡೆ ದೋಸ್ತಿಗಳೇ ಅಧಿಕೃತ ಅಭ್ಯರ್ಥಿಗಳಿಗೆ ಕೈ ಕೊಟ್ಟಿದ್ದಾರೆ ಎಂಬ ಅನುಮಾನ ಕೇಳಿಬರುತ್ತಿದೆ.
ಮಂಡ್ಯದಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಸ್ಥಳೀಯ ಕಾಂಗ್ರೆಸಿಗರು ಕೊನೆ ಕ್ಷಣದವರೆಗೆ ಬೆಂಬಲ ಸೂಚಿಸಲಿಲ್ಲ. ಇದೇ ರೀತಿ ಮೈಸೂರಿನಲ್ಲೂ ಕಾಂಗ್ರೆಸ್ ಅಭ್ಯರ್ಥಿ ವಿಜಯ್ಶಂಕರ್ಗೆ ಜೆಡಿಎಸ್ ಸಹಕಾರ ನೀಡಲಿಲ್ಲ ಎಂಬ ಆರೋಪವಿದೆ.
ಇದಕ್ಕೆ ಪುಷ್ಠಿ ನೀಡುವಂತೆ ಸಚಿವ ಜಿ.ಟಿ.ದೇವೇಗೌಡ ಹೇಳಿಕೆ ನೀಡಿದ್ದು, ಉರಿಯುವ ತುಪ್ಪಕ್ಕೆ ಬೆಂಕಿ ಸುರಿದಂತಾಗಿತ್ತು. ಈ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ದಳಪತಿಗಳು ಕಾಂಗ್ರೆಸಿಗರ ಮೇಲೆ ಮುಗಿ ಬೀಳುವ ಕೆಲಸ ಮಾಡುತ್ತಿದ್ದಾರೆ.
ಸಾಮಾನ್ಯವಾಗಿ ಜೆಡಿಎಸ್ನಲ್ಲಿ ವರಿಷ್ಠರ ಸೂಚನೆ ಇಲ್ಲದೆ ಕೆಳಹಂತದ ನಾಯಕರು ಮಾತನಾಡುವುದು ನಿಷಿದ್ಧ. ಈಗ ಒಬ್ಬೊಬ್ಬರೇ ಕಾಂಗ್ರೆಸ್ ವಿರುದ್ಧ ಬುಸುಗುಡುತ್ತಿರುವುದನ್ನು ನೋಡಿದರೆ ದೋಸ್ತಿಗಳ ಸಂಬಂಧ ವಿಚ್ಛೇಧನದ ಹಾದಿ ಹಿಡಿದಿರುವುದು ಗುಟ್ಟಾಗಿ ಉಳಿದಿಲ್ಲ.






