ಕಲಬುರಗಿ,ಮೇ 11- ಅಧಿಕಾರದ ಆಸೆ ತೋರಿಸಿ ದುಡ್ಡಿನ ಆಮಿಷ ಒಡ್ಡಿ ಬಲವಂತ ಮಾಡಿ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಿ ಈಗಾಗಲೇ ಸೋತಿರುವ ಬಿಜೆಪಿಯವರ ಹೊಸ ಪ್ರಯತ್ನಗಳಿಗೆ ಕಾಂಗ್ರೆಸ್ ಶಾಸಕರು ಸೊಪ್ಪು ಹಾಕುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಯ ನಂತರ 20 ಕಾಂಗ್ರೆಸ್‍ನ ಶಾಸಕರು ಏನೂ ಬೇಕಾದರೂ ನಿರ್ಣಯ ಕೈಗೊಳ್ಳಬಹುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನೀಡಿರುವ ಹೇಳಿಕೆಗೆ ತಿರುಗೇಟು ನೀಡಿದರು.
ಅಧಿಕಾರ ಸಿಗದ ಹತಾಶೆಯಿಂದ ಬಿಜೆಪಿಯವರು ಈ ರೀತಿಯ ಮಾತುಗಳನ್ನು ಆಡುತ್ತಿದ್ದಾರೆ.ಶಾಸಕರಿಗೆ ಆಮಿಷವೊಡ್ಡುತ್ತಿದ್ದಾರೆ. ಶಾಸಕರಿಗೆ ಕೊಡಲು ಬಿಜೆಪಿಯವರಿಗೆ ಅಷ್ಟೊಂದು ದುಡ್ಡು ಎಲ್ಲಿಂದ ಬರುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಉತ್ತರಿಸಬೇಕಿದೆ.
ಯಡಿಯೂರಪ್ಪ ಅವರು ಈಗಾಗಲೇ ಒಂದು ಬಾರಿ ಸರ್ಕಾರ ರಚಿಸಲು ಪ್ರಯತ್ನ ಮಾಡಿದ್ದರು.ರಾಜ್ಯಪಾಲರು ಅದಕ್ಕೆ ಅವಕಾಶ ಕೊಟ್ಟಿದ್ದರು. ಆದರೆ ಯಡಿಯೂರಪ್ಪ ಕೈಯಲ್ಲಿ ಬಹುಮತ ಸಾಬೀತುಪಡಿಸಲು ಸಾಧ್ಯವಾಗಲಿಲ್ಲ. ಮೂರೇ ದಿನದಲ್ಲಿ ಮನೆಗೆ ಹೋದರು. ಈಗ ಪದೇ ಪದೇ ಕಾಂಗ್ರೆಸ್‍ನ 20 ಶಾಸಕರು ಬಿಜೆಪಿಗೆ ಬರುತ್ತಾರೆ ಎಂದು ಹೇಳುವುದಕ್ಕೆ ನಾಚಿಕೆಯಾಗುವುದಿಲ್ಲವೇ? ನಮ್ಮ ಯಾವ ಶಾಸಕರು ಎಲ್ಲಿಗೂ ಹೋಗುವುದಿಲ್ಲ, ಬಿಜೆಪಿಯ ಆಮಿಷಗಳಿಗೆ ಸೊಪ್ಪು ಹಾಕುವುದಿಲ್ಲ. ಅಧಿಕಾರ ಮತ್ತು ದುಡ್ಡಿನ ಆಮಿಷದಿಂದ ಕಾಂಗ್ರೆಸ್ ಶಾಸಕರನ್ನು ಸೆಳೆಯುವುದು ಸುಲಭವಲ್ಲ, ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಜೆಡಿಎಸ್ ತೊರೆದು ಬಂದಿದ್ದರು ಬಿಜೆಪಿ ಹಿರಿಯ ನಾಯಕ ಆರ್.ಅಶೋಕ್ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ ಅವರು, ನಾನಾಗಿಯೇ ಜೆಡಿಎಸ್ ಬಿಟ್ಟು ಬರಲಿಲ್ಲ. ಅಹಿಂದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರಿಂದ ದೇವೇಗೌಡರೇ ನನ್ನನ್ನು ಜೆಡಿಎಸ್‍ನಿಂದ ಹೊರಹಾಕಿದ್ದರು.
ಅಶೋಕ್ ಅವರಿಗೆ ಸತ್ಯವೂ ಗೊತ್ತಿಲ್ಲ, ಸುಳ್ಳು ಗೊತ್ತಿಲ್ಲ. ಬಾಯಿಗೆ ಬಂದಂತೆ ಏನೇನೋ ಮಾತನಾಡುತ್ತಾರೆ. ಅವರ ಹೇಳಿಕೆಗಳಿಗೆ ತಲೆಬುಡ ಇರುವುದಿಲ್ಲ. ಯಾವುದೂ ಅರ್ಥವೂ ಆಗುವುದಿಲ್ಲ ಎಂದು ಕಿಡಿಕಾರಿದರು.
ಜೆಡಿಎಸ್‍ನಿಂದ ಹೊರ ಬಂದ ನಂತರ ನಾನು ಕಾಂಗ್ರೆಸ್ ಪಕ್ಷ ಸೇರಿ ಚುನಾವಣೆ ಎದುರಿಸಿದ್ದೇನೆ. ಆದರೆ ಉಮೇಶ್ ಜಾಧವ್ ಅವರಿಗೆ ಅಂತಹ ಯಾವ ಅನ್ಯಾಯಗಳು ಆಗಿರಲಿಲ್ಲ. ಕಾಂಗ್ರೆಸ್ ಪಕ್ಷ ಅವರಿಗೆ ಎಲ್ಲವನ್ನೂ ಕೊಟ್ಟಿತ್ತು. ಆದರೂ ಪಕ್ಷ ತೊರೆಯುವ ಮೂಲಕ ದ್ರೋಹ ಮಾಡಿದ್ದಾರೆ. ಅವರನ್ನು ಯಾರೂ ಹೊರಹಾಕಿರಲಿಲ್ಲ. ಅವರಾಗಿಯೇ ಹೊರ ಹೋಗಿ ಕ್ಷೇತ್ರದ ಜನತೆಯ ಮೇಲೆ ಅನಗತ್ಯ ಚುನಾವಣೆ ಹೇರಿದ್ದಾರೆ. ಇದಕ್ಕಾಗಿ ಕ್ಷೇತ್ರದ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ಜೊತೆಗಿನ ಮೈತ್ರಿಯಿಂದ ನಮ್ಮ ಪಕ್ಷಕ್ಕೆ ನಷ್ಟವಾಗಿದೆ ಎಂದು ಜೆಡಿಎಸ್ ಶಾಸಕ ನಾರಾಯಣಗೌಡ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ನಾವು ದೇವೇಗೌಡರು, ಕುಮಾರಸ್ವಾಮಿ ಅವರ ಜೊತೆ ಮಾತುಕತೆ ನಡೆಸಿ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ನಾರಾಯಣಗೌಡ ಅವರನ್ನು ಕೇಳಿ ಹೊಂದಾಣಿಕೆ ಮಾಡಿಕೊಂಡಿಲ್ಲ, ಹೀಗಾಗಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.