![bandeppa Kashempur](http://kannada.vartamitra.com/wp-content/uploads/2019/02/bandeppa-Kashempur-610x381.jpg)
ಕಲಬುರಗಿ, ಮೇ 11- ನಿಮಗೆ ತಾಕತ್ತಿದ್ರೆ ಸರ್ಕಾರ ಉರುಳಿಸಿ.ಮೇ 23ರಲ್ಲ ಇನ್ನೂ 8 ದಿನ ತೆಗೆದುಕೊಳ್ಳಿ ಎಂದು ಬಿಜೆಪಿಯವರಿಗೆ ಸಚಿವ ಬಂಡೆಪ್ಪ ಕಾಶಂಪೂರ್ ಸವಾಲು ಹಾಕಿದ್ದಾರೆ.
ಸಮ್ಮಿಶ್ರ ಸರ್ಕಾರ ಪತನವಾಗದಿದ್ದರೆ ಬಿಜೆಪಿಯವರು ರಾಜೀನಾಮೆ ಕೊಡುತ್ತಾರಾ ಎಂದು ಕಲಬುರಗಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ರಾಹುಲ್ ಗಾಂಧಿ ಮತ್ತು ದೇವೇಗೌಡರ ಒಪ್ಪಂದದಂತೆ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ. ಇನ್ನೂ ನಾಲ್ಕು ವರ್ಷ ನಿರಾತಂಕವಾಗಿ ಸರ್ಕಾರ ನಡೆಯಲಿದೆ. ಮೇ 23ರ ನಂತರ ಬಿಜೆಪಿಯವರ ಎಲ್ಲಾ ದಾರಿ ಬಂದ್ ಆಗಲಿದೆ. ರಮೇಶ್ ಜಾರಕಿಹೊಳಿ ಸೇರಿದಂತೆ ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ. ಎರಡು ಉಪಚುನಾವಣೆ ನಾವೇ ಗೆಲ್ಲುತ್ತೇವೆ. ಇಬ್ಬರು ಪಕ್ಷೇತರರು ನಮ್ಮ ಕಡೆಯೇ ಇದ್ದಾರೆ. ನಮ್ಮ ಸರ್ಕಾರಕ್ಕೆ ಏನು ಆಗುವುದಿಲ್ಲ ಎಂದರು.
ಬಿಜೆಪಿಯವರ ಎಲ್ಲಾ ಡೆಡ್ಲೈನ್ಗಳು ಮುಗಿದು ಹೋಗಿವೆ. ಸರ್ಕಾರದಲ್ಲಿರುವ ನಾವೇನು ಗೋಲಿ ಆಡ್ತಿರ್ತಿತೀವಾ ಎಂದರು. ಜೆಡಿಎಸ್ ಪಕ್ಷದಲ್ಲಿ ಯಾವುದೇ ಅಸಮಾಧಾನವಿಲ್ಲ. ಕೆಳ ಹಂತದಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿವೆ ಎಂದರು.
ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಬೇಕೆಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷದವರಾಗಲೀ, ಜೆಡಿಎಸ್ ಪಕ್ಷದವರಾಗಲಿ ಮನೆಯಲ್ಲಿ ಮಾತನಾಡಬೇಕು. ಯಾರೂ ಕೂಡ ಬಹಿರಂಗ ಹೇಳಿಕೆಗಳನ್ನು ನೀಡಬಾರದು ಎಂದು ಹೇಳಿದರು.
ಉದ್ರಿ ಅಲ್ಲ; ನಗದು:
ನಮ್ಮದು ಉದ್ರಿ ಅಲ್ಲ ನಗದು ಸರ್ಕಾರ. ನಾವು ನಿಗದಿಯಂತೆ ರೈತರ ಸಾಲ ಮನ್ನಾ ಮಾಡುತ್ತೇವೆ. ಋಣಮುಕ್ತ ಪತ್ರವನ್ನು ಕೊಟ್ಟಿದ್ದೇವೆ. ಸಾಲಮನ್ನಾ ಯಾವಾಗ ಆಗುತ್ತೆ ಅನ್ನುವ ಪತ್ರವನ್ನು ರೈತರಿಗೆ ಬರೆದಿದ್ದೇವೆ ಎಂದು ಕಾಶಂಪೂರ್ ಹೇಳಿದರು.