ಗುಲ್ಬರ್ಗ, ಮೇ 10-ಪರಿಶಿಷ್ಟ ಜಾತಿ ಮತ್ತು ವರ್ಗದ ಸರ್ಕಾರಿ ನೌಕರರ ಮುಂಬಡ್ತಿಗೆ ಸಂಬಂಧಿಸಿದ ಕಾಯ್ದೆಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿರುವುದರಿಂದ ಎಸ್ಸಿ-ಎಸ್ಟಿ ನೌಕರರಿಗೆ ಸಾಂವಿಧಾನಿಕವಾಗಿ ಆಗುತ್ತಿದ್ದ ಅನ್ಯಾಯ ಸರಿಪಡಿಸಿದಂತಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಸ್ವಗತಾರ್ಹ ನಿಲುವು. ಈ ತೀರ್ಪಿನ ಎಲ್ಲ ಸಾಧಕ-ಬಾಧಕಗಳನ್ನು ಮುಖ್ಯ ಕಾರ್ಯದರ್ಶಿಯವರೊಂದಿಗೆ ಚರ್ಚಿಸಿ ಇಲಾಖಾವಾರು ಪಟ್ಟಿಯನ್ನು ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದರು.
ಈಗಾಗಲೇ ಕೆಲವರಿಗೆ ಹಿಂಬಡ್ತಿಯಾಗಿದ್ದು, ಅಂತಹವರ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತೀರಿ ಎಂಬ ಪ್ರಶ್ನೆಗೆ ಅವರಿಗೆ ಮತ್ತೆ ಅದೇ ಗ್ರೇಡ್ನ ಹುದ್ದೆ ದೊರಕಿಸಿಕೊಡುವ ಕ್ರಮ ವಹಿಸುತ್ತೇವೆ ಎಂದರು.
ಎಸ್ಸಿ-ಎಸ್ಟಿ ನೌಕರರಿಗೆ ನ್ಯಾಯ ದೊರಕಿಸಿದಂತಾಗಿದೆ. ಈ ನಿಟ್ಟಿನಲ್ಲಿ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸುತ್ತೇವೆ ಎಂದರು.