ಬೆಂಗಳೂರು, ಮೇ 10- ಜಿದ್ದಾಜಿದ್ದಿನ ಕುರುಕ್ಷೇತ್ರವಾಗಿರುವ ಕಲಬುರಗಿ ಜಿಲ್ಲೆ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯನ್ನು ಗೆಲ್ಲಲು ಬಿಜೆಪಿ ಸಮುದಾಯಕ್ಕೊಬ್ಬರನ್ನು ನಿಯೋಜಿಸಲು ಮುಂದಾಗಿದೆ.
ಈ ಹಿಂದೆ ಬಾಗಲಕೋಟೆ ಜಿಲ್ಲೆ ಜಮಖಂಡಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲು ಅನುಸರಿಸಿದ ಕಾರ್ಯತಂತ್ರವನ್ನೇ ಇಲ್ಲಿ ಬಿಜೆಪಿ ಅಳವಡಿಸಿಕೊಂಡಿದೆ.
ಜಮಖಂಡಿಯಲ್ಲಿ ಅಂದು ಕಾಂಗ್ರೆಸ್ ಗ್ರಾಮಪಂಚಾಯ್ತಿಯಿಂದ ಹಿಡಿದು ತಾಲ್ಲೂಕು ಮಟ್ಟದವರೆಗೆ ಒಂದೊಂದು ಜಾತಿಯ 5-10 ಮಂದಿಯನ್ನು ನಿಯೋಜನೆ ಮಾಡಿತ್ತು. ಪರಿಣಾಮ ಎಲ್ಲ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿ ಭಾರೀ ಮತಗಳ ಅಂತರದಿಂದ ಗೆದ್ದಿತ್ತು.
ಈಗ ಚಿಂಚೋಳಿ ಮತ್ತು ಕುಂದಗೋಳದಲ್ಲೂ ಇದೇ ಮಾದರಿಯನ್ನು ಅನುಸರಿಸಲು ಬಿಜೆಪಿ ಮುಂದಾಗಿದೆ.ಎರಡೂ ಕ್ಷೇತ್ರಗಳಲ್ಲಿ ವೀರಶೈವ ಲಿಂಗಾಯಿತ ಮತಗಳು ನಿರ್ಣಾಯಕವಾಗಿವೆ.