ಪ್ರಧಾನಿ ಹುದ್ದೆಯ ಬಗ್ಗೆ ನಾನು ಯಾವುದೇ ಕನಸು ಕಂಡಿಲ್ಲ: ಸಚಿವ ನಿತಿನ್ ಗಡ್ಕರಿ

ನವದೆಹಲಿ: ನಾನು ಕಪ್ಪು ಕುದುರೆಯಲ್ಲ, ಪ್ರಧಾನಿ ಹುದ್ದೆಯ ಆಕಾಂಕ್ಷಿಯೂ ಅಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಗದ್ಕರಿ, ಪ್ರಧಾನಿ ಹುದ್ದೆಯ ಬಗ್ಗೆ ನಾನು ಯಾವುದೇ ಅಜೆಂಡಾ, ಬಯಕೆ, ಕನಸು ಕಟ್ಟಿಕೊಂಡಿಲ್ಲ. ನರೇಂದ್ರ ಮೋದಿ ಅವರು ನಮ್ಮ ನಾಯಕರು, ಅವರೇ ಪ್ರಧಾನಿಯಾಗುತ್ತಾರೆ ಎಂದು ಸ್ಪಷ್ಟನೆ ನೀಡಿದರು.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಒಕ್ಕೂಟಕ್ಕೆ ಬಹುಮತ ಸಿಗುತ್ತದೆ ಎಂಬ ವಿಶ್ವಾಸವಿದೆ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮತ್ತೆ ಸರ್ಕಾರ ರಚನೆಯಾಗಲಿದೆ ಎಂದು ತಿಳಿಸಿದರು.

ನಾವು ಎನ್‍ಡಿಎ ಸರ್ಕಾರವನ್ನು ರೂಪಿಸುತ್ತೇವೆ, ಬಿಜೆಪಿ ಸರ್ಕಾರವನ್ನಲ್ಲ. ಲೋಕಸಭಾ ಚುನಾವಣೆ ಫಲಿತಾಂಶ ಮೇ 23ರಂದು ಬರಲಿದ್ದು, ಬಿಜೆಪಿಗೆ ಬಹುಮತ ಸಿಕ್ಕಿದ್ದರೂ ನಾವು ಎನ್‍ಡಿಎ ಸರ್ಕಾರವೆಂದೇ ಪರಿಗಣಿಸುತ್ತೇವೆ. ನಮ್ಮ ಮೈತ್ರಿ ಪಕ್ಷಗಳನ್ನು ಜೊತೆಯಾಗಿಯೇ ಕರೆದುಕೊಂಡು ಸಾಗುತ್ತೇವೆ ಎಂದು ಹೇಳಿದರು.

ರಾಜೀವ್ ಗಾಂಧಿಯವರು ನಂಬರ್ 1 ಭ್ರಷ್ಟರಾಗಿಯೇ ಪ್ರಾಣಬಿಟ್ಟರು ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವರು, ಮೋದಿ ಅವರನ್ನು ಚೌಕಿದಾರ್ ಚೋರ್ ಹೈ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕೆ ಮಾಡಿದರು. ಇದಕ್ಕೆ ಪ್ರತ್ಯುತ್ತರ ನೀಡಲು ರಾಜೀವ್ ಗಾಂಧಿಯವರ ಹೆಸರನ್ನು ತೆಗೆದುಕೊಂಡರು ಎಂದು ಸ್ಪಷ್ಟನೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ